ಬೆಂಗಳೂರು, ಮೇ 29- ವಿಷಯಾಧಾರಿತವಾಗಿ ಚರ್ಚೆ ನಡೆಸುವ ಬದಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರ ವೈಯಕ್ತಿಕ ತೇಜೋವಧೆಗೆ ಇಳಿದಿರುವುದು ಖಂಡನೀಯ ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಬಂಗಾರಪ್ಪ ಹಿಂದುಳಿದ ವರ್ಗಗಳ ನಾಯಕ. ವಿಜಯೇಂದ್ರ ಅವರಿಗೆ ಹಿಂದುಳಿದ ವರ್ಗದವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿಯೇ ಅವರದೇ ಪಕ್ಷದ ಕೆ.ಎಸ್.ಈಶ್ವರಪ್ಪ ಅವರನ್ನು ಮೂಲೆಗುಂಪು ಮಾಡಿ, ಹೀನಾಯವಾಗಿ ಟೀಕೆ ಮಾಡಿ ಅಪಮಾನ ಮಾಡಿದ್ದಾರೆ ಎಂದರು.
ಬಿಜೆಪಿ ಕಟ್ಟುವುದರಲ್ಲಿ ಯಡಿಯೂರಪ್ಪ ಅವರಿಗೆ ಸರಿಸಮಾನವಾಗಿ ಈಶ್ವರಪ್ಪ ಕೆಲಸ ಮಾಡಿದರು. ಅವರನ್ನು ಕರ್ನಾಟಕದ ಅಡ್ವಾಣಿ ಎಂದು ಕರೆಯಲಾಗುತ್ತಿತ್ತು. ಅವರು ಸಂಘಟಿಸಿದ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಮಾಡಿದ್ದೇನು ಎಂದು ಜನ ನೋಡಿದ್ದಾರೆ ಎಂದರು.
ಮಧುಬಂಗಾರಪ್ಪ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಉಳಿಸುವಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಅವರು ಶ್ಲಾಘನಾರ್ಹರು.ಈ ಹಿಂದೆ ಬಹಳಷ್ಟು ಜನ ಸಾಮೂಹಿಕ ನಕಲು ಮಾಡುತ್ತಿದ್ದುದು ಬಹಿರಂಗ ಸತ್ಯ. ಮಧುಬಂಗಾರಪ್ಪ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಸಿಸಿ ಟಿವಿ ಹಾಕಿ ಮಾಸ್ ಕಾಪಿ ತಪ್ಪಿಸಿದ್ದಾರೆ.
ಇದರಿಂದಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗಿದೆ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಕಾರಾತಕ ಪರಿಣಾಮ ಗೋಚರಿಸಲಿದೆ. ಮೂರು ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಪಾಸಾಗಲು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ವಿಜಯೇಂದ್ರ ಮತ್ತು ಅವರ ಸಲಹೆಗಾರರಿಗೆ ಅಧ್ಯಯನದ ಕೊರತೆ ಇದ್ದಂತೆ ಕಾಣುತ್ತದೆ. ಅದಕ್ಕಾಗಿ ಮಧುಬಂಗಾರಪ್ಪ ಅವರ ಕೇಶಶೈಲಿಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಒಂದು ಪಕ್ಷದ ರಾಜ್ಯಾಧ್ಯಕ್ಷರು ಈ ಮಟ್ಟಕ್ಕೆ ಇಳಿಯುವುದು ಶೋಭೆ ತರುವುದಿಲ್ಲ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕೇಶಶೈಲಿಯ ಬಗ್ಗೆ ಯಾರೂ ಆಕ್ಷೇಪವೆತ್ತಲಿಲ್ಲ. ಮಧು ಬಂಗಾರಪ್ಪ ಅವರಿಗೆ ಅವರದೇ ಆದ ಸ್ವರೂಪವಿದೆ. ಅದನ್ನು ಲೇವಡಿ ಮಾಡುವ ಮೂಲಕ ವಿಜಯೇಂದ್ರ ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ. ವಿಷಯಾಧಾರಿತ ಹಾಗೂ ಸೈದ್ಧಾಂತಿಕವಾಗಿ ಚರ್ಚೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ. ನಾನು ಪ್ರತಿನಿಧಿಸುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಒಂದು ಮತ ಹೆಚ್ಚು ಪಡೆದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಸವಾಲಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಪ್ರದೀಪ್ ಈಶ್ವರ್ ಹೇಳಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.