Friday, November 22, 2024
Homeರಾಜ್ಯಪ್ರಜ್ವಲ್‌ ಪ್ರಕರಣ : ಸಿಎಂಗೆ ಪತ್ರ ಬರೆದು 16 ಬೇಡಿಕೆಯಿಟ್ಟ 107 ಸಾಹಿತಿಗಳು

ಪ್ರಜ್ವಲ್‌ ಪ್ರಕರಣ : ಸಿಎಂಗೆ ಪತ್ರ ಬರೆದು 16 ಬೇಡಿಕೆಯಿಟ್ಟ 107 ಸಾಹಿತಿಗಳು

ಬೆಂಗಳೂರು,ಮೇ 15- ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ 107 ಸಾಹಿತಿಗಳು ಹಾಗೂ ಪ್ರಜ್ಞಾವಂತ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು 16 ಬೇಡಿಕೆಗಳನ್ನು ಮಂಡಿಸಿದ್ದಾರೆ.

ಹಿರಿಯ ಲೇಖಕರಾದ ಡಾ.ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಕೆ.ನೀಲಾ, ಕೆ.ಎಸ್‌‍ ವಿಮಲಾ, ಕುಂ.ವೀರಭದ್ರಪ್ಪ, ಮುಜರ್‌ ಅಸ್ಸಾದಿ, ಅಗ್ರಹಾರ ಕೃಷ್ಣಮೂರ್ತಿ, ಡಾ.ಲೀಲಾ ಸಂಪಿಗೆ, ಭಾನು ಮುಸ್ತಾಕ್‌, ದು.ಸರಸ್ವತಿ, ಜಿ.ಸಿ.ಬಯ್ಯಾರೆಡ್ಡಿ, ಗುರುಪ್ರಸಾದ್‌ ಕೆರೆಗೋಡು, ಮಾವಳ್ಳಿ ಶಂಕರ್‌ಸೇರಿದಂತೆ ಒಟ್ಟು 107 ಮಂದಿ ಪತ್ರ ಬರೆದಿದ್ದಾರೆ.

ಸಮೂಹ ಅತ್ಯಾಚಾರ ಹಗರಣ, ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯ ಘಟನೆಗೆ ಸಂಬಂಧಪಟ್ಟಂತೆ ವಿಡಿಯೋಗಳು, ಫೋಟೋಗಳನ್ನು ದಾಖಲಿಸಿಟ್ಟುಕೊಂಡಿರುವುದು, ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು ಅಪರಾಧವಾಗಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂದೂ ಕೇಳರಿಯದಂತಹ ಇಂತಹ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದು ಆಘಾತಕಾರಿ. ಪ್ರಜ್ವಲ್‌ ರೇವಣ್ಣ ಅವರ ಕುಟುಂಬದ ಸದಸ್ಯರು ಸಾಂವಿಧಾನಿಕವಾಗಿ ಹಲವು ಹುದ್ದೆಗಳನ್ನು ಮತ್ತು ಸೌಲಭ್ಯಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಹಗರಣ ಬೆಳಕಿಗೆ ಬಂದ ಕೂಡಲೇ ಹಾಸನದ ಲೋಕಸಭಾ ಚುನಾವಣೆಯನ್ನು ಸ್ಥಗಿತಗೊಳಿಸದೇ ಇರುವುದು ಹಾಗೂ ಆರೋಪಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಆರೋಪಿಯ ಚಲನವಲನಗಳ ಮೇಲೆ ಕಣ್ಗಾವಲು ಹಾಕದೇ ಆತ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಹೀಗಾದರೆ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರದ ಮೇಲೆ ವಿಶ್ವಾಸ ಇಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ವಿಡಿಯೋ ಬಹಿರಂಗಗೊಂಡಿರುವುದರಿಂದ ಸಂತ್ರಸ್ತರಿಗೆ ಸಾಕಷ್ಟು ಮುಜುಗರವಾಗಿದ್ದು, ಸಾರ್ವಜನಿಕವಾಗಿ ತಿರುಗಾಡಲು ತೊಂದರೆಯಾಗುತ್ತಿದೆ. ಅವರ ಕುಟುಂಬಸ್ಥರು ಮಾನಸಿಕ ಯಾತನೆಗೆ ಗುರಿಯಾಗಿದ್ದಾರೆ. ವಿಡಿಯೋಗಳು, ಯುವಜನರು, ಕಾಮುಕರು, ಮಕ್ಕಳ ಮೇಲೆ ಘೋರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು, ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು, ಸಂತ್ರಸ್ತ ಮಹಿಳೆಯರನ್ನು ಹೆದರಿಸುವ, ಅವಹೇಳನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ನೀಡಬೇಕು. ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳದಂತೆ ಕಡಿವಾಣ ಹಾಕಬೇಕು, ಎಸ್‌‍ಐಟಿ ತನಿಖೆಗೆ 2 ತಿಂಗಳ ಕಾಲಮಿತಿ ನಿಗದಿ ಮಾಡಬೇಕು. ಪ್ರಜ್ವಲ್‌ ಅವರ ಕಾರು ಚಾಲಕ ಕಾರ್ತಿಕ್‌ನನ್ನು ಬಂಧಿಸಬೇಕು, ದೇವರಾಜೇಗೌಡ ಅವರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ವಿಡಿಯೋಗಳನ್ನು ಬಹಿರಂಗಗೊಳಿಸುವ ಮೂಲಕ ಚುನಾವಣೆಯನ್ನು ಅಸ್ತವ್ಯಸ್ತಗೊಳಿಸಲು ಸಂಚು ಮಾಡಿದವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಬೇಕು. ವಿಡಿಯೋಗಳ ಬಗ್ಗೆ ಮಾಹಿತಿ ಹೊಂದಿದ್ದ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರನ್ನು ಸಂಚಿನ ಭಾಗ ಎಂದು ಪರಿಗಣಿಸಬೇಕು. ಪ್ರಜ್ವಲ್‌ ಅವರ ಕುಟುಂಬದ ಸದಸ್ಯರ ಬಗ್ಗೆಯೂ ಪ್ರಕರಣ ದಾಖಲಿಸಬೇಕು.

ಆರೋಪಿ ದೇಶ ಬಿಟ್ಟು ಪರಾರಿಯಾಗಲು ಅವಕಾಶ ಮಾಡಿಕೊಟ್ಟ ಗುಪ್ತಚರ ಅಧಿಕಾರಿಗಳನ್ನು ವಜಾಗೊಳಿಸಬೇಕು. ಹಾಸನದಲ್ಲಿ ಎಚ್‌.ಡಿ.ರೇವಣ್ಣ ಅವರ ಶಿಫಾರಸಿನ ಮೇಲೆ ನಿಯೋಜನೆಗೊಂಡ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ರೇವಣ್ಣ ಅವರ ಶಾಸಕತ್ವವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಪ್ರಕರಣದಲ್ಲಿ ತಮ ಹಾಗೂ ದೇವೇಗೌಡರ ಹೆಸರನ್ನು ಬಳಕೆ ಮಾಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಮತ್ತೊಂದೆಡೆ ತಾವೇ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News