ಬೆಂಗಳೂರು,ಮೇ7- ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇ ಸಿಎಂ ಅಭಿಯಾನ ನಡೆಸಿದ್ದ ಕಾಂಗ್ರೆಸ್ ಮೇಲೆ ಇದೀಗ ಅದರ ತಂತ್ರವೇ ತಿರುಮಂತ್ರವಾಗಿ ಪರಿಣಮಿಸಿದೆ. ಏಕೆಂದರೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಆಡಿಯೋ ಆಚೆ ಬರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಕಾರಣ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ ಬೆನ್ನಲ್ಲೇ ಈಗ ಬೆಂಗಳೂರಿನಲ್ಲಿ ಪೋಸ್ಟರ್‌ಗಳು ಎಲ್ಲೆಡೆ ರಾಜಾಜಿಸುತ್ತಿವೆ.
ನಗರದ ಅನೇಕ ಕಡೆ ರಾತ್ರೋರಾತ್ರಿ ಕೆಲವರು ಪೋಸ್ಟರ್‌ಗಳನ್ನು ಅಂಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕೆಗಳ ಸುರಿಮಳೆಗೈಯ್ಯಲಾಗಿದೆ.
ಬಸವೇಶ್ವನಗರ, ರಾಜಾಜಿನಗರ, ಸದಾಶಿವನಗರ ಸೇರಿದಂತೆ ಅನೇಕ ಕಡೆ ಸುಮಾರು 15ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಅಂಟಿಸಿ ಸಿಎಂ ಮತ್ತು ಡಿಸಿಎಂ ವಿರುದ್ದ ಗಂಭೀರ ಆರೋಪಗಳನ್ನು ಮಾಡಲಾಗಿದೆ.ಒಂದು ಪೋಸ್ಟರ್‌ನಲ್ಲಿ ಡಿ.ಕೆ.ಶಿವಕುಮಾರ್ ಹೋಲುವ ಭಾವಚಿತ್ರವನ್ನು ಅಂಟಿಸಿ ರಾಜಕೀಯಕ್ಕಾಗಿ ಫೋಟೋವನ್ನೇ ಮಾರಾಟಕ್ಕಿಟ್ಟ ಲುಲು ಕುಮಾರ ಎಂದು ಆರೋಪಿಸಲಾಗಿದೆ.
ಮತ್ತೊಂದು ಪೋಸ್ಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೂ ನೀವು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಈ ಮಹಾನುಭಾವ ನಿಮ್ಮ ಸಿ.ಡಿಯನ್ನು ಆಚೆ ತರಲು ಹಿಂದೆಮುಂದೆ ನೋಡುವುದಿಲ್ಲ ಎಂದು ಬರಹದಲ್ಲಿ ಎಚ್ಚರಿಸಲಾಗಿದೆ.
ಹೆಣ್ಣುಮಕ್ಕಳ ಫೋಟೊ ಬಳಸಿ ರಾಜಕೀಯ ಬೋಸು ಡಿಕೆ ನಾನು ಎಂದು ಆರೋಪಿಸಲಾಗಿದೆ. ಹುಡುಗಿಯರನ್ನು ಸಪ್ಲೈ ಮಾಡುವವನು ಪಿಂಪ್, ಹುಡುಗಿಯರ ವ್ಯಾಪಾರ ಮಾಡುವವನು ಪಿಂಪ್, ಹುಡುಗಿಯರ ಕಳುಹಿಸಿ ಹನಿಟ್ರಾಪ್ ಮಾಡುವವನು ಪಿಂಪ್. ಇವರೆಲ್ಲ ಪಿಂಪ್ ಆದ ಮೇಲೆ ಹುಡುಗಿಯರ ವಿಡಿಯೋವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವವನು ಏನು? ಅವನು ಪಿಂಪ್ ಅಷ್ಟೇ ಎಂದು ದೂರಲಾಗಿದೆ.
ಹೆಣ್ಣು ಮಕ್ಕಳ ಫೋಟೋಗಳನ್ನು ರಾಜಕೀಯಕ್ಕಾಗಿ ಬಳಸಿಕೊಂಡ ರಾಜಕೀಯ ವ್ಯಭಿಚಾರಿ ಡಿ.ಕೆ.ಶಿವಕುಮಾರ್ ಎಂದು ಪೋಸ್ಟರ್‌ನಲ್ಲಿ ಹಾಕಲಾಗಿದೆ. ಹೀಗೆ ಅನೇಕ ಪೋಸ್ಟರ್‌ಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರ ಬಗ್ಗೆ ಕೆಲವು ಅನಾಮಧೇಯ ವ್ಯಕ್ತಿಗಳು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.