ಎ.ಮಂಜು ಅರ್ಜಿ ತಿರಸ್ಕøತ, ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್
ಬೆಂಗಳೂರು,ಜ.17- ಲೋಕಸಭೆ ಚುನಾವಣೆ ವೇಳೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ಮೇಲೆ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಚಿವ ಪರಾಜಿತ ಅಭ್ಯರ್ಥಿ ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ. ಇದರಿಂದ ಪ್ರಜ್ವಲ್ ರೇವಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಚುನಾವಣಾ ತಕರಾರು ಅರ್ಜಿ ಜೊತೆ ಅಫಿಡೆವಿಟ್ ಸಲ್ಲಿಸದ ಹಿನ್ನೆಲೆಯಲ್ಲಿ ಎ.ಮಂಜು ಅವರ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರು ವಜಾಗೊಳಿಸಿ ಆದೇಶ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಪರವಾಗಿ ಉದಯ್ ಹೊಳ್ಳ ವಾದ ಮಂಡಿಸಿದರು. ಪ್ರಜ್ವಲ್ ಅವರು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಎ.ಮಂಜು ಅವರು ಆರೋಪಿಸಿದ್ದರು. ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾಯಾಧೀಶರು ವಜಾ ಮಾಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜ್ ಗೌಡ ಎಂಬುವರು ಸಲ್ಲಿಸಿರುವ ಮತ್ತೊಂದು ಅರ್ಜಿ ಬಾಕಿಯಿದ್ದು, ಆ ಅರ್ಜಿ ವಿಚಾರಣೆಯನ್ನು ಜ.23ಕ್ಕೆ ಮುಂದೂಡಲಾಗಿದೆ. ಎರಡು ಅರ್ಜಿಗಳ ಪೈಕಿ ಒಂದು ಅರ್ಜಿಯಿಂದ ಪ್ರಜ್ವಲ್ ರೇವಣ್ಣ ಅವರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದಂತಾಗಿದೆ.