ಬೆಂಗಳೂರು,ಜೂ.22- ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ವಿರುದ್ಧ ಜೆಡಿಎಸ್ ಕಾರ್ಯಕರ್ತರೊಬ್ಬರು ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಮುಖ್ಯಮಂತ್ರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸೂರಜ್ ಅವರ ಆಪ್ತ ಶಿವಕುಮಾರ್ ಎಂಬುವವರು ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು
ನೀಡಿದ್ದು, ತಮನ್ನು ಹಾಗೂ ಎಂಎಲ್ಸಿಯವರನ್ನು ಬ್ಲಾಕ್ಮೇಲ್ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತರೊಬ್ಬರು ರಾಜ್ಯದ ಡಿಜಿಪಿ, ಮುಖ್ಯಮಂತ್ರಿ, ಗೃಹಸಚಿವರು ಮತ್ತು ಹಾಸನ ಜಿಲ್ಲೆಯ ಎಸ್ಪಿಯವರಿಗೆ 14 ಪುಟಗಳ ದೂರು ಬರೆದಿದ್ದು, ಕೃತ್ಯದ ಬಗ್ಗೆ ಸುದೀರ್ಘ ವಿವರಣೆ ನೀಡಿದ್ದಾರೆ.
ಫೈನಾನ್‌್ಸ ಕಂಪನಿಯಲ್ಲಿ ತಾನು ಕೆಲಸ ಮಾಡುವಾಗ ಶಿವಕುಮಾರ್ ಎಂಬುವವರ ಪರಿಚಯವಾಗಿತ್ತು. ಅನಂತರದ ದಿನಗಳಲ್ಲಿ ಶಿವಕುಮಾರ್ ಅವರು ಸೂರಜ್ ರೇವಣ್ಣ ಬ್ರಿಗೇಡ್‌ನ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ. ಸೂರಜ್ ರೇವಣ್ಣ ಅವರನ್ನು ಭೇಟಿ ಮಾಡಿಸಿ ಕೆಲಸ ಕೊಡಿಸಿ ಸಹಾಯ ಮಾಡುವಂತೆ ತಾವು ಶಿವಕುಮಾರ್‌ರಲ್ಲಿ ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ.
ಶಿವಕುಮಾರ್ ಅವರ ಸಲಹೆ ಮೇರೆಗೆ ಇದೇ 16ರಂದು ಸಂಜೆ 6.45 ಕ್ಕೆ ಘನ್ನಿಕಡ ಗ್ರಾಮದ ತೋಟದ ಮನೆಗೆ ಹೋಗಿದ್ದು, ಅಲ್ಲಿ ಸೂರಜ್ ರೇವಣ್ಣ ತಮ ಮೇಲೆ ಅಮಾನುಷವಾಗಿ ಅಸಹಜವಾದ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ದೂರಿದ್ದಾರೆ.ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ದೂರು ಬರೆದಿರುವ ಸಂತ್ರಸ್ತ ಯುವಕ ಸೂರಜ್ ರೇವಣ್ಣ ಮತ್ತು ಅವರ ಬೆಂಬಲಿಗರಿಂದ ಪ್ರಾಣ ಬೆದರಿಕೆ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರತಿ ದೂರು: ಇದಕ್ಕೆ ಪ್ರತಿಯಾಗಿ ಜೂ.21 ರಂದು ಸಂಜೆ 5.20ಕ್ಕೆ ಶಿವಕುಮಾರ್ ಎಂಬುವರು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅರಕಲಗೂಡು ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತನೊಬ್ಬ ಎಂಎಲ್‌ಸಿಯವರನ್ನು ಪರಿಚಯ ಮಾಡಿಕೊಡು ಹಾಗೂ ಯಾವುದಾದರೂ ಕೆಲಸ ಕೊಡಿಸಿ ಸಹಾಯ ಮಾಡು ಎಂದು ಕೇಳಿಕೊಂಡಿದ್ದ.
ನಾವಿಬ್ಬರೂ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಿದ್ದುದರಿಂದ ಚುನಾವಣಾ ಸಮಯದಲ್ಲಿ ಎಂಎಲ್‌ಸಿ ಸೂರಜ್ ರೇವಣ್ಣ ಅವರನ್ನು ಕಾರ್ಯಕರ್ತರಿಗೆ ಪರಿಚಯ ಮಾಡಿಕೊಟ್ಟಿದ್ದೆ. ಅವರನ್ನು ಭೇಟಿ ಮಾಡಬೇಕು ಎಂದು ಈತ ಕೇಳಿದಾಗ ವಾರದ ದಿನಗಳಲ್ಲಿ ಎಂಎಲ್‌ಸಿಯವರು ಬ್ಯುಸಿ ಇರುತ್ತಾರೆ. ಶನಿವಾರ ಅಥವಾ ಭಾನುವಾರ ಘನ್ನಿಕಡಕ್ಕೆ ಹೋಗಿ ಭೇಟಿ ಮಾಡುವಂತೆ ಹೇಳಿದ್ದೆ.
ಜೂ.17 ರಂದು ನನಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಮಾರನೆಯ ದಿನ ನಾನು ಆತನಿಗೆ ಕರೆ ಮಾಡಿ ಸಂದೇಶದ ಬಗ್ಗೆ ವಿಚಾರಿಸಿದೆ. ಜೂ.16 ರಂದು ಎಂಎಲ್‌ಸಿಯವರನ್ನು ಭೇಟಿ ಮಾಡಿದ್ದೇನೆ. ಈಗ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನನ್ನ ಜೀವನ ಕಷ್ಟದಲ್ಲಿದೆ.
ಹೇಗಾದರೂ ಮಾಡಿ ಸಹಾಯ ಮಾಡು. ಇಲ್ಲವಾದರೆ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಬಹಿರಂಗವಾಗಿ ಹೇಳಿ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಜೆಡಿಎಸ್ ಕಾರ್ಯಕರ್ತ ಬೆದರಿಕೆ ಹಾಕಿದ್ದ ಎಂದು ಶಿವಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ.
ಸುಳ್ಳು ಹೇಳಬೇಡ ಎಂದು ನಾನು ಸಲಹೆ ನೀಡಿದ್ದೆ. ಇದು ನಿಯತ್ತಿಗೆ ಕಾಲವಲ್ಲ. ಸುಳ್ಳು ಹೇಳಿಯೇ ಬದುಕಬೇಕು. ನನಗೆ 5 ಕೋಟಿ ಕೊಡಿಸು. ಸುಮನಾಗುತ್ತೇನೆ ಎಂದು ಒತ್ತಡ ಹಾಕಿದ್ದ. ಕೊನೆಗೆ ಅದು 3 ಕೋಟಿ, 2.50 ಕೋಟಿ, 2 ಕೋಟಿವರೆಗೂ ಚೌಕಾಸಿ ನಡೆಯಿತು. ನೀವು ಹಣ ಕೊಡದೇ ಇದ್ದರೆ, ನಾನು ಸೂರಜ್‌ರವರ ವಿರುದ್ಧ ಆರೋಪ ಮಾಡಿ, ದೂರು ಕೊಟ್ಟರೆ, ಬೇರೆಯವರು 1 ಕೋಟಿ ಹಣ ನೀಡಲು ಸಿದ್ಧರಿದ್ದಾರೆ ಎಂದು ಎಚ್ಚರಿಸಿದ್ದ.
ಜೂ.19 ರಂದು ಜೆಡಿಎಸ್ ಕಾರ್ಯಕರ್ತನ ಭಾವ ಎಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದರು. ಈ ಇಬ್ಬರೂ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ದೂರು ನೀಡಿದ್ದಾರೆ.
ಈ ಕುರಿತು ಐಪಿಸಿ 384, 506 ಅಡಿ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.