ಬೆಂಗಳೂರು,ಆ.27- ಆರ್‌ಎಸ್‌ಎಸ್ ಇಲ್ಲದ ಕಾರಣ ಇಂಡೋನೇಷ್ಯಾದಲ್ಲಿ ಗಲಭೆಗಳಿಲ್ಲ ಎಂದು ನಟ ಪ್ರಕಾಶ್‌ರಾಜ್ ಹೇಳಿದ್ದಾರೆಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ @MeghUpdates ಎಂಬ ಖಾತೆಯಿಂದ ಪೋಸ್ಟ್ ಹಾಕಲಾಗಿದ್ದು ಆರ್ಎಸ್ಎಸ್ ಇದ್ದಕಡೆ ಗಲಭೆಗಳು ಆಗುತ್ತವೆ ಎಂದ ಪ್ರಕಾಶ್ರಾಜ್ ಹೇಳಿದ್ದಾರೆ. ಈ ಬಗ್ಗೆ ಇಂಡೋನೇಷ್ಯಾವನ್ನು ಉದಾಹರಣೆಯಾಗಿ ನೀಡಿರುವ ಪ್ರಕಾಶ್ ರಾಜ್, ಶೇ.90 ಮುಸ್ಲೀಮರು, ಶೇ.2ರಷ್ಟು ಹಿಂದೂಗಳು ಹಾಗೂ 11 ಸಾವಿರ ಮಂದಿರಗಳು ಇಂಡೋನೇಷ್ಯಾದಲ್ಲಿವೆ. ಆದರೆ ಅಲ್ಲಿ ಆರ್ಎಸ್ಇಲ್ಲ. ಆರ್ಎಸ್ಎಸ್ ಇರದ ಕಡೆ ಗಲಭೆಗಳು ನಡೆಯಲ್ಲ ಎಂಬುವುದು ತಮ ಗ್ರಹಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಕೆಲವರು ಪ್ರಕಾಶ್ ರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ, ಹಲವರು ವಿರೋಧ ವ್ಯಕ್ತಪಡಿಸಿ, ಟೀಕೆ ಮಾಡುತ್ತಿದ್ದಾರೆ. ಈ ನಡುವೆ ಹೇಳಿಕೆ ಸಂಬಂಧ ಪ್ರತಿಕ್ರಿಯ ನೀಡಿರುವ ಪ್ರಕಾಶ್ ರಾಜ್ ಅವರು, ನಾನು ಈ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ, ಇಂತಹ ಪೋಸ್ಟ್‌ಗಳನ್ನು ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನನ್ನ ವಕೀಲರೊದಿಗೆ ಮಾತುಕತೆ ನಡೆಸಲಾಗಿದೆ, ಈ ಬಗ್ಗೆ ಮಂಗಳವಾರ ಕಾನೂನು ಸಮರ ಶುರುವಾಗಲಿದೆ. ಈಗಾಗಲೇ ಟ್ವಿಟರ್‌ಗೂ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.
ಬಲಪಂಥೀಯ ಗುಂಪುಗಳು ಸುಳ್ಳು ಹೇಳಿಕೆಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಕೆಲವಸ ಮಾಡುತ್ತಿವೆ. ಇದು ಸಾಮಾನ್ಯ ತಂತ್ರವಾಗಿವೆ. ಬಲಪಂಥೀಯರು ಇಂತಹ ಹೇಳಿಕೆಗಳನ್ನು ಸೃಷ್ಟಿಸಿ. ಸುಳ್ಳುಗಳನ್ನು ಪ್ರಚಾರ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ನನ್ನನ್ನು ಹಿಂದೂಗಳ ವಿರೋಧಿ ಎಂದು ಬಿಂಬಿಸುವುದೇ ಅವರ ಉದ್ದೇಶವಾಗಿದೆ. ನಾನು ಬಿಜೆಪಿ, ಮೋದಿ ಮತ್ತು ಅಮಿತ್ ಶಾ ಅವರ ವಿರುದ್ಧವಿದ್ದು, ಹೀಗಾಗಿಯೇ ನನ್ನನ್ನು ಹಿಂದೂಗಳ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ.
ಹೇಳಿಕೆ ನೀಡಬೇಕಿದ್ದರೆ @MeghUpdates ನೀವೇ ನೀಡಿ, ನನ್ನ ಹೆಸರು ಬಳಸಿ ಹೇಳಿಕೆ ನೀಡಬೇಡಿ. ನಾನು ಮೂರು ದಿನಗಳಿಂದ ರಂಗಭೂಮಿಯ ಕಾರ್ಯಕ್ರಮದಲ್ಲಿ ನಿರತನಾಗಿದ್ದೆ. ಇದ್ದಕ್ಕಿದ್ದಂತೆ ಪೋಸ್ಟ್ ನೋಡಿದೆ. ಸಾಕಷ್ಟು ಜನರು ಟೀಕೆ ಮಾಡುತ್ತಿದ್ದು, ಕೋಪಗೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.