ಅಯೋಧ್ಯೆ,ಜ.21- ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಸಕಲ ರೀತಿಯಲ್ಲಿ ಸಜ್ಜುಗೊಂಡು ಝಗಮಗಿಸುತ್ತಿರುವ ಅಯೋಧ್ಯೆಯತ್ತ ಇಡೀ ದೇಶವಷ್ಟೇ ಅಲ್ಲ ವಿಶ್ವದ ಚಿತ್ತ ನೆಟ್ಟಿದೆ. ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಕೋಟಿಕೋಟಿ ರಾಮಭಕ್ತರು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಅಯೋಧ್ಯೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ರಾಮನ ಎತ್ತರೆತ್ತರದ ಕಟೌಟುಗಳು ರಾರಾಜಿಸುತ್ತಿವೆ. ಅಯೋಧ್ಯೆಯಾದ್ಯಂತ ರಾಮನ ವೈಭವ ಮನೆಮಾಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಕ್ಷಬೇಧ ಮರೆತ ಜನ ಅಯೋಧ್ಯೆಯತ್ತ ದಾಂಗುಡಿ ಇಟ್ಟಿದ್ದಾರೆ.
ನಾಳಿನ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯಲ್ಲಿ ದೊಡ್ಡ ದೊಡ್ಡ ಎಲ್‍ಇಡಿ ಸ್ಕ್ರೀನ್‍ಗಳನ್ನು ಅಳವಡಿಸಲಾಗಿದೆ. ದೂರದ ಅಮೆರಿಕ, ಇಂಗ್ಲೆಂಡ್, ಬ್ರಿಟನ್, ಆಸ್ಟ್ರೇಲಿಯಾ, ಆಫ್ರಿಕಾ, ಕಾಂಬೋಡಿಯಾ ಸೇರಿದಂತೆ ನೂರಾರು ದೇಶಗಳಲ್ಲೂ ಕೂಡ ರಾಮೋತ್ಸವದ ಸಡಗರ ಮನೆಮಾಡಿದೆ. ಅಯೋಧ್ಯೆಗೆ ಬರುವ ಭಕ್ತರನ್ನು ಸ್ವಾಗತಿಸಲು ಸ್ವಯಂಸೇವಕರು ಸಜ್ಜಾಗಿದ್ದಾರೆ. ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ರಾಮ ಪಟ್ಟಾಭಿಷೇಕ ಮಹೋತ್ಸವದ ಗತವೈಭವದ ನೆನಪುಗಳು ಈ ಕಲಿಯುಗದಲ್ಲಿಮರುಕಳಿಸುತ್ತಿವೆ. ರಾಮನ ಸ್ವಾಗತಕ್ಕೆ ಅಂದು ವೈಭವದ ಸಿದ್ಧತೆ ನಡೆಸಿದಂತೆಯೇ ಇಂದೂ ಕೂಡ ಜನ ಅದ್ಧೂರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ರಾಜಕಾರಣಿಗಳ ಪೋಸ್ಟರ್‍ಗಳು ಒಂದೆಡೆ ರಾರಾಜಿಸುತ್ತಿದ್ದರೆ ಸಾಧು ಸಂತರು ಸೇರಿದಂತೆ ಎಲ್ಲಾ ಪೋಸ್ಟರ್‍ಗಳೂ ಕೂಡ ಅಯೋಧ್ಯೆಯಲ್ಲಿ ಕಂಗೊಳಿಸುತ್ತಿವೆ. ರಸ್ತೆಯುದ್ದಕ್ಕೂ ರಂಗೋಲಿಗಳನ್ನು ಹಾಕಿ ಜನ ರಾಮನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ತಳಿರು-ತೋರಣ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರದಿಂದ ಶೃಂಗರಿಸಲಾಗಿದೆ.
ಒಟ್ಟಾರೆ ರಾಮರಾಜ್ಯವೇ ಅಯೋಧ್ಯೆಗೆ ಇಳಿದುಬಂದಂತಹ ವೈಭವ ಉಂಟಾಗಿದೆ. ಅಯೋಧ್ಯೆಗೆ ಬರುವ ಭಕ್ತರೆಲ್ಲರಿಗೂ ದಾಸೋಹದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ದಿನದ 24 ಗಂಟೆಯೂ ಕೂಡ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೂತನ ರಾಮಮಂದಿರವಂತೂ ಎಲ್ಲರ ಕಣ್ಮನ ಸೆಳೆಯುತ್ತಿದೆ. ನೂರಾರು ಬಗೆಬಗೆಯ ಹೂಗಳಿಂದ ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ದೇಶಾದ್ಯಂತ ನಾಡಿನ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ನೇರಪ್ರಸಾರದ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಇಸ್ಕಾನ್, ಜೈನ ಧರ್ಮದ ಮಠಗಳು ವಿವಿಧ ಧಾರ್ಮಿಕ ಮಠದವರು ಬರುವ ಭಕ್ತಾದಿಗಳಿಗೆ ಅನ್ನ ದಾಸೋಹವನ್ನು ಏರ್ಪಡಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮನಾಮದ ಜಪ ಕೇಳಿಬರುತ್ತಿದೆ. ನಾಳೆ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿಯವರು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಾದ್ಯಂತ ಎರಡು ಸಾವಿರಕ್ಕೂ ಅಧಿಕ ಗಣ್ಯರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನ ನೀಡಲಾಗಿದೆ. ಲಕ್ಷಾಂತರ ಕಾರ್ಯಕರ್ತರು, ಕರಸೇವಕರು, ಅಯೋಧ್ಯೆ ರಾಮಜನ್ಮಭೂಮಿಗಾಗಿ ಹೋರಾಟ ನಡೆಸಿದವರು ಈಗಾಗಲೇ ಅಯೋಧ್ಯೆಗೆ ಆಗಮಿಸಿ ರಾಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ದೇಶ ಎಲ್ಲಾ ಜನರು ಪಾಲ್ಗೊಳ್ಳಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಮನೆಯಲ್ಲೇ ರಾಮನ ಸ್ಮರಣೆ ಮಾಡಿ, ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ದೀಪಗಳನ್ನು ಹಚ್ಚುವಂತೆ ಈಗಾಗಲೇ ಸೂಚನೆ ನೀಡಿ ಮಂತ್ರಾಕ್ಷತೆಯನ್ನು ಮನೆಮನೆಗೂ ವಿತರಿಸಲಾಗಿದೆ. ಒಟ್ಟಾರೆ ನಾಳಿನ ರಾಮೋತ್ಸವ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದೆ.