ಬೆಂಗಳೂರು,ಏ.12- ರಾಜ್ಯದ ಕೆಲವೆಡೆ ಚದುರಿದಂತೆ ಮುಂಗಾರು ಪೂರ್ವ ಮಳೆ ಆಗುತ್ತಿದ್ದು, ರಾಜ್ಯದಲ್ಲಿ ಇನ್ನೆರೆಡು ದಿನ ಇದೇ ರೀತಿ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೆರೆಡು ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ರಾಜ್ಯದ ಕೆಲವೆಡೆ ಅಲ್ಲಲ್ಲಿ ಮಳೆಯಾಗಲಿದೆ, ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದೆ. ಮಳೆಯಾಗುವ ಸಾಧ್ಯತೆಗಳಿವೆ. ಉಳಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರೆದಿದೆ. ಚಿಕ್ಕಮಗಳೂರು, ಹಾವೇರಿ, ಧಾರವಾಡ, ಗದಗ, ಹುಬ್ಬಳ್ಳಿ , ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಡಗು, ಶಿವಮೊಗ್ಗ ಸೇರಿದಂತೆ ಕೆಲವೆಡೆ ನಿನ್ನೆ ಮಳೆಯಾಗಿದೆ.
ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ಹಾಗೂ ರಾತ್ರಿ ಮಳೆಯಾಗುವ ಮುನ್ಸೂಚನೆಗಳಿವೆ. ಮಳೆ ಬಿದ್ದ ಪರಿಣಾಮ ಗರಿಷ್ಠ ತಾಪಮಾನದಲ್ಲಿ 1 ರಿಂದ 2 ಡಿ.ಸೆ.ನಷ್ಟು ಇಳಿಕೆಯಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಇಂದು ಮತ್ತು ನಾಳೆ ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ.