Thursday, May 2, 2024
Homeಜಿಲ್ಲಾ ಸುದ್ದಿಗಳುಬಾಡೂಟ ಬೀದಿಗೆ ಚೆಲ್ಲಿದ ಅಧಿಕಾರಿಗಳು

ಬಾಡೂಟ ಬೀದಿಗೆ ಚೆಲ್ಲಿದ ಅಧಿಕಾರಿಗಳು

ಹಾಸನ,ಏ.12- ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದಲ್ಲಿ ಆಹಾರ ಪದಾರ್ಥಗಳನ್ನು ರಸ್ತೆಗೆ ಚೆಲ್ಲಿರುವುದರ ವಿರುದ್ಧ ತೀವ್ರ ಆಕ್ರೋಶ ಕೇಳಿಬಂದಿದೆ. ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಇಂದು ಹೊಳೆನರಸೀಪುರ ತಾಲೂಕಿನಲ್ಲಿ ಪ್ರಚಾರ ಕಾರ್ಯ ನಡೆಸಲು ಕಾರ್ಯಕ್ರಮ ನಿಗದಿಯಾಗಿತ್ತು. ಇದೇ ವೇಳೆ ಕೋಡಿಹಳ್ಳಿ ಗ್ರಾಮದ ಮುಖಂಡರೊಬ್ಬರ ಹುಟ್ಟುಹಬ್ಬದ ಅಂಗವಾಗಿ ಭೋಜನಕೂಟದ ಆಯೋಜನೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದಾಗಿ ಮಾಂಸದೂಟಕ್ಕೆ ಅವಕಾಶ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ಚುನಾವಣಾ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಫ್ಲೈಯಿಂಗ್ ಸ್ಕ್ವಾಡ್ ತಯಾರಿಸಲಾಗಿದ್ದ ಆಹಾರ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಂಡಿದೆ. ಬಳಿಕ ಅದನ್ನು ರಸ್ತೆಗೆ ಬಿಸಾಡಿ ಅಧಿಕಾರಿಗಳು ತೆರಳಿದ್ದಾರೆ.

ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಂಸದೂಟ ಮಾಡಿಸಿದ್ದಕ್ಕಾಗಿ ಹೊಳೆನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ ಸ್ಥಳೀಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹುಟ್ಟುಹಬ್ಬದ ಅಂಗವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆಗೂ ಇದಕ್ಕೂ ಸಂಬಂಧವಿರಲಿಲ್ಲ.

ಜೆಡಿಎಸ್ ನಾಯಕರು ದುರುದ್ದೇಶಪೂರ್ವಕವಾಗಿ ಪೊಲೀಸರ ಮೇಲೆ ಪ್ರಭಾವ ಬೀರಿ ಊಟವನ್ನು ರಸ್ತೆಗೆ ಚೆಲ್ಲುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆಲವು ಸ್ಥಳೀಯರು ರಸ್ತೆಗೆ ಬಿದ್ದಿದ್ದ ಆಹಾರವನ್ನೇ ತೆಗೆದುಕೊಂಡು ಊಟ ಮಾಡಿರುವುದು ಮೊಬೈಲ್‍ನಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ ಸೆರೆಯಾಗಿದೆ.

RELATED ARTICLES

Latest News