ಬೆಂಗಳೂರು,ಜೂನ್.21-ಮದ್ಯದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ.ರಾಜ್ಯದಲ್ಲಿ ಮದ್ಯ ವ್ಯಾಪಾರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಮದ್ಯ ಪ್ರಿಯರನ್ನು ಆಕರ್ಷಿಸಲು ಅಬಕಾರಿ ಇಲಾಖೆ ಹೊಸ ಮಾರ್ಗ ಹುಡುಕುತ್ತಿದೆ.ಈ ನಡುವೆ ಜುಲೈ 1ರಿಂದ ಅನ್ವಯವಾಗುವಂತೆ ದುಬಾರಿ ಬೆಲೆಯ ಬ್ರಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ. ಈ ಸಂಬಂಧ ಹೆಚ್ಚುವರಿ ಅಬಕಾರಿ ತೆರಿಗೆ ಇಳಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ನೆರೆಹೊರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆಗೆ ಅನುಗುಣವಾಗಿ ರಾಜ್ಯದಲ್ಲೂ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯನ್ನು ಪರಿಷ್ಕರಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು.
ಆದರೆ ಕಳೆದ 2023ರ ಜುಲೈನಲ್ಲಿ ಭಾರತೀಯ ಉತ್ಪಾದಿತ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿತ್ತು. 2024ರ ಜನವರಿಯಲ್ಲಿ ಬಿಯರ್ ಮೇಲಿನ ತೆರಿಗೆ ಏರಿಕೆ ಮಾಡಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ 1ವರ್ಷದ ನಂತರ ಸರ್ಕಾರ ತೆರಿಗೆ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ.ನೆರೆಯ ರಾಜ್ಯಗಳಿಂದ ಇಲ್ಲಿಗೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪೂರೈಕೆಯಾಗುತ್ತಿದೆ. ಗಡಿ ಭಾಗದ ಜಿಲ್ಲೆಗಳ ಜನರು ಪಕ್ಕದ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ.
ಇದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿತ್ತು. ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ದರ ಪರಿಷ್ಕರಣೆಯ ನಿರ್ಧಾರ ಮಾಡಿದೆ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.