Sunday, November 24, 2024
Homeರಾಜಕೀಯ | Politicsಬಿಜೆಪಿ ಸಂಸದರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಬಿಜೆಪಿ ಸಂಸದರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು,ಸೆ.30- ಬಿಜೆಪಿಯ 25 ಮಂದಿ ಸಂಸದರು, ನಾಲ್ಕೈದು ಮಂದಿ ಸಚಿವರು ಕಾವೇರಿ ವಿವಾದ ಬಗೆಹರಿಸುವ ಸಂದರ್ಭದಲ್ಲಿ ಅಲ್ಲದೆ ಮತ್ತಿನ್ಯಾವಾಗ ರಾಜ್ಯಕ್ಕೆ ಬಳಕೆಯಾಗುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿಯಂತ್ರಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಕಾರದ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಆಯ್ಕೆ ಬಿಟ್ಟರೆ ನಮ್ಮ ಬಳಿ ಬೇರೆ ಮಾತುಗಳಿಲ್ಲ. ಬಿಜೆಪಿಯವರು ಕಾನೂನು ತಂಡ ಸರಿಯಾಗಿ ವಾದ ಮಾಡಿಲ್ಲ, ಅದಕ್ಕಾಗಿ ರಾಜ್ಯಕ್ಕೆ ಇಂತಹ ತೀರ್ಪು ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಯಾವ ತಜ್ಞರನ್ನು ನೇಮಿಸಬೇಕೆಂದು ಬಿಜೆಪಿಯವರೇ ಸಲಹೆ ಕೊಡಲಿ. ರಾಜ್ಯದ ಪರವಾಗಿ ತೀರ್ಪು ಬರುತ್ತದೆ ಎಂದಾದರೆ ಅವರು ಹೇಳಿದ ವಕೀಲರನ್ನೇ ನೇಮಿಸುತ್ತೇವೆ ಎಂದರು.

ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ವಾದ ಮಾಡಿದ ವಕೀಲರ ತಂಡವೇ ಈಗಲೂ ಮುಂದುವರೆದಿದೆ. ಒಂದು ವೇಳೆ ಈ ಬಗ್ಗೆ ಆಕ್ಷೇಪವಿದ್ದರೆ ದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಂಸದ ಸಭೆಯಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದ ಎರಡು ಸರ್ವಪಕ್ಷ ಸಭೆಯಲ್ಲಿ ಬಿಜೆಪಿಯವರು ಸಲಹೆ ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಕಾವೇರಿ ವಿಷಯದಲ್ಲಿ ರಾಜಕೀಯ ಬೇಡ. ಒಟ್ಟಾಗಿ ಕೆಲಸ ಮಾಡೋಣ ಎಂಬುದು ನಮ್ಮ ನಿಲುವು. ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದ ದೆಹಲಿಯಲ್ಲಿ ಎರಡು ದಿನಕ್ಕಾದರೂ ಪ್ರಧಾನಿ ಭೇಟಿಗೆ ಸಮಯ ಸಿಗಲಿಲ್ಲ. ಬಿಜೆಪಿಯ ಭಕ್ತರು ಪ್ರಧಾನಿ ಮೋದಿ ವಿಶ್ವಗುರು ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮೋದಿಯವರು ಅದೇ ರೀತಿ ರಾಷ್ಟ್ರಗುರುವಾಗಿ ಎರಡು ರಾಜ್ಯಗಳ ನಡುವಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲವೇ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ

ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು ಇಂಡಿಯಾ ಕೂಟದಲ್ಲಿರುವ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಜೊತೆ ಮಾತುಕತೆ ನಡೆಸಿ ವಿವಾದ ಬಗೆಹರಿಸಬೇಕೆಂದು ಬೆಂಗಳೂರಿನ ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ. ಅದೇ ಸಂಸದರು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷನನ್ನು ಬ್ರದರ್ ಎಂದು ಹೇಳಿಕೊಂಡು ಜೊತೆಯಲ್ಲಿ ತಿರುಗಾಡುತ್ತಾರೆ. ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಪ್ರಧಾನಿ ಬಳಿ ಹೋಗಿ.

ಬಿಜೆಪಿಯವರು ತಮಿಳುನಾಡಿನ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದಾರೆ. ಅವರು ಈಗ ಕೇಂದ್ರದ ಆರ್ಥಿಕ ಸಚಿವರೂ ಕೂಡ. ರಾಜ್ಯದಿಂದ ನಾಲ್ಕು ಮಂದಿ ಕೇಂದ್ರ ಸಚಿವರಿದ್ದಾರೆ, 25 ಸಂಸದರೂ ಸೇರಿ ಆಯ್ಕೆಯಾಗಿದ್ದಾರೆ, ಇವರೆಲ್ಲಾ ರಾಜ್ಯಕ್ಕೆ ಯಾವಾಗ ಉಪಯೋಗಕ್ಕೆ ಬರುತ್ತಾರೆ, ಕನ್ನಡದ ಪರವಾಗಿ ಯಾವಾಗ ನಿಲ್ಲುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯಸರ್ಕಾರ ಕಾವೇರಿ ವಿಷಯದಲ್ಲಿ ನಡೆದ ಪ್ರತಿಭಟನೆಗಳಿಗೆ ಅಡ್ಡಿಪಡಿಸಿಲ್ಲ. ಬಂದ್ನಿಂದಾಗಿ ನಿನ್ನೆ ಒಂದೇ ದಿನ 5 ಸಾವಿರ ಕೋಟಿ ರೂ.ಗಳ ಆರ್ಥಿಕ ನಷ್ಟವಾಗಿದೆ ಎಂದು ಎಫ್ಕೆಸಿಸಿಐ ಹೇಳಿಕೆ ನೀಡಿದೆ.ಈ ಹಿನ್ನೆಲೆಯಲ್ಲಿ ಬಂದ್ ಬೇಡ ಎಂದು ಹೇಳಿದ್ದರು. ಉಳಿದಂತೆ ರಾಜ್ಯಸರ್ಕಾರ ಕಾವೇರಿ ವಿಷಯದಲ್ಲಿ ನಾಡಿನ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಅಗತ್ಯ ಕಾನೂನು ಹೋರಾಟ ಮುಂದುವರೆಸಿದೆ ಎಂದು ಹೇಳಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳ ಸ್ವರೂಪ ಆಧರಿಸಿ ತನಿಖೆ ನಡೆಯುತ್ತಿವೆ. ವಿಶೇಷ ತನಿಖಾ ದಳ, ಪ್ರಾದೇಶಿಕ ಆಯುಕ್ತರು, ನ್ಯಾಯಾಂಗ ಸಮಿತಿಗಳನ್ನು ರಚಿಸಿ ಪ್ರಕರಣಗಳ ಆಳ ಹಾಗೂ ಸ್ವರೂಪ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ವರದಿ ಸಂಬಂಧಪಟ್ಟ ಸಚಿವರಿಗೆ ತಲುಪಿದ ಬಳಿಕ ಮುಖ್ಯಮಂತ್ರಿ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.


ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದಿದ್ದ ನೂರಾರು ಕೋಟಿ ರೂ.ಗಳ ಹಗರಣ ಪ್ರಾಥಮಿಕ ವರದಿಯಲ್ಲಿ ಸಾಬೀತಾಗಿದೆ. ಅದನ್ನು ಪ್ರಾದೇಶಿಕ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ. ಯಾವುದನ್ನೂ ಮುಚ್ಚಿ ಹಾಕುವ ಉದ್ದೇಶ ತಮ್ಮದಲ್ಲ
ಎಂದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆದರೆ ಯಾವುದನ್ನೂ ಸಾಬೀತುಪಡಿಸಲಿಲ್ಲ. ಪ್ರತಿಬಾರಿ ಪೆನ್ಡ್ರೈವ್ ಅನ್ನು ತೋರಿಸಿ ಹೆದರಿಸಿದರು. ಆದರೆ ಈವರೆಗೂ ಬಿಡುಗಡೆ ಮಾಡಿಲ್ಲ. ಶಾಸನ ಸಭೆಯಲ್ಲಿ ಆರೋಪಗಳ ಕುರಿತು ಎರಡು ದಿನ ಚರ್ಚೆಗೆ ನಾವು ಸಿದ್ಧರಿದ್ದೆವು. ಆದರೆ ಅವರು ಫಲಾಯನವಾದ ಅನುಸರಿಸಿದರು. ಬಸವರಾಜು ಬೊಮ್ಮಾಯಿ ಅವರ ಅನುಭವ ನನ್ನ ವಯಸ್ಸಿಗಿಂತಲೂ ಹೆಚ್ಚಿದೆ. ನನ್ನಂತಹ ಕಿರಿಯರಿಂದ ಅವರು ಹೇಳಿಸಿಕೊಳ್ಳಬಾರದು, ಆರೋಪ ಮಾಡುವಾಗ ಗಟ್ಟಿತನ ಇರಬೇಕು, ಗಾಳಿಯಲ್ಲಿ ಗುಂಡು ಹಾರಿಸಬಾರದು, ಯಾವುದೇ ದಾಖಲೆ ಇದ್ದರೂ ತನಿಖೆ ನಡೆಸಲು ನಾವು ಸಿದ್ಧ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನಿರಾಧಾರ. ಹಾಗೆಯೇ ಸರ್ಕಾರ ಪತನವಾಗಲಿದೆ ಎಂಬ ಅವರ ಹೇಳಿಕೆಯೂ ಪ್ರಜಾಪ್ರಭುತ್ವ ವಿರೋಯಾಗಿದೆ.

ಚುನಾಯಿತ ಸರ್ಕಾರವನ್ನು ಪತನಗೊಳಿಸುವ ಸಲುವಾಗಿಯೇ ಕುಮಾರಸ್ವಾಮಿ ದೆಹಲಿಗೆ ಹೋಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನಿಸುತ್ತಿದೆ. ಕೇಂದ್ರ ಸರ್ಕಾರ ತನ್ನ ಬಳಿ ಇರುವ ಸಿಬಿಐ, ಇಡಿ ಯಂತಹ ಸಂಸ್ಥೆಗಳನ್ನು ಛೂಬಿಟ್ಟು ಬ್ಲಾಕ್ಮೇಲ್ ಮಾಡಬೇಕು ಅಥವಾ ಕುದುರೆ ವ್ಯಾಪಾರ ಮಾಡಿ ಶಾಸಕರನ್ನು ಖರೀದಿಸಬೇಕು. ಇದನ್ನು ಹೊರತುಪಡಿಸಿದರೆ ಇನ್ನಾವ ಮಾರ್ಗದಲ್ಲಿ ಸರ್ಕಾರ ಪತನ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಜಾತ್ಯತೀತ ತತ್ವ ಎಂದು ಹೇಳುತ್ತಿದ್ದ ಜೆಡಿಎಸ್ನವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಇದ್ದು, ಅಧಿಕಾರ ದಾಹದಿಂದ ಸಂವಿಧಾನದ ಆಶಯಗಳನ್ನು ತೂರಿ ಬಿಜೆಪಿ ತಾಳಕ್ಕೆ ಕುಣಿಯುತ್ತಿದೆ ಎಂದು ನೇರವಾಗಿ ಹೇಳಲಿ ಎಂದು ಸವಾಲು ಹಾಕಿದರು.

RELATED ARTICLES

Latest News