ಬೆಂಗಳೂರು, ಅ.14- ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ದಾಳಿಗಳು, ತನಿಖೆಗಳು ವಿರೋಧ ಪಕ್ಷದ ನಾಯಕರ ಮೇಲಷ್ಟೆ ಏಕೆ ನಡೆಯುತ್ತಿವೆ ಎಂದು ಪ್ರಶ್ನಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಎಲೆಕ್ಷನ್ ಕಲೆಕ್ಷನ್ ಎಂದು ಆರೋಪ ಮಾಡುವವರು ಕೇಂದ್ರದಿಂದ ತನಿಖೆ ಸಂಸ್ಥೆಗಳಿಂದ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆ ಖರ್ಚಿಗೆ ಕರ್ನಾಟಕದಲ್ಲಿ ಹಣ ಸಂಗ್ರಹಿಸಿ ಕಳುಹಿಸ ಲಾಗುತ್ತಿದೆ ಎಂಬ ಆರೋಪ ನಿರಾಧಾರ ಎಂದರು. ಆದಾಯ ತೆರಿಗೆ, ಸಿಬಿಐ, ಜಾರಿ ನಿರ್ದೇಶನಾಲಯ ಎಲ್ಲವೂ ಬಿಜೆಪಿಯವರ ಕೈನಲ್ಲೇ ಇವೆ. ಅವುಗಳಿಂದ ತನಿಖೆ ಮಾಡಿಸುವುದು ಬೇಡ ಎಂದು ಯಾರು ಹೇಳಿದ್ದಾರೆ.
ಕುಮಾರಸ್ವಾಮಿಯವರು ಆರೋಪ ಮಾಡುತ್ತಿದ್ದಾರೆ. ಈಗ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರ ಮಾತುಗಳನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು ಕೇಳುತ್ತಾರೆ. ತಾವು ಮಾಡಿದ ಆರೋಪಗಳಿಗೆ ಪೂರಕವಾಗಿ ದಾಖಲೆಗಳನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಲಿ, ತನಿಖೆ ಮಾಡಿಸಲಿ, ತಪ್ಪು ಮಾಡಿದ್ದವರು ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಪ್ರಚಾರಕ್ಕಾಗಿ ಆರೋಪ ಮಾಡುತ್ತಾ ಏಕೆ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಚೈತ್ರ ಕುಂದಾಪುರ ಪ್ರಕರಣದಲ್ಲಿ ಪ್ರಮುಖ ನಾಯಕರಿಗೆ ಹಣ ರವಾನೆಯಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆ ಪ್ರಕರಣದಲ್ಲಿ ಏಕೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿಲ್ಲ. ವಿರೋಧ ಪಕ್ಷಗಳ ನಾಯಕರ ಮೇಲಷ್ಟೆ ಏಕೆ ದಾಳಿಗಳಾಗುತ್ತಿವೆ. ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಗಳು ಅಕಾರಕ್ಕೆ ಬಂದಾಗಲೆಲ್ಲಾ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ.
ಹಿಂದೆ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಬಹುತೇಕ ಕಡೆ ಈ ರೀತಿ ರಾಜಕಾರಣ ನಡೆಸಿದೆ ಎಂದರು.
ಕೇಂದ್ರ ಲೆಕ್ಕ ಪರಿಶೋಧನೆ ಸಂಸ್ಥೆ ನರೇಂದ್ರ ಮೋದಿ ಸರ್ಕಾರದಲ್ಲಿ 30 ರಿಂದ 40 ಸಾವಿರ ಕೋಟಿ ಹಗರಣಗಳಾಗಿವೆ ಎಂದು ವರದಿ ನೀಡಿದೆ. ಈ ಆರೋಪ ಕುರಿತು ತನಿಖೆ ನಡೆಯುತ್ತಿಲ್ಲ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ದಾಳಿಗಳಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬಿಜೆಪಿ ಮನೆಯೊಂದು ನೂರು ಬಾಗಿಲು ಎಂಬಂತಾಗಿದೆ. ಅಲ್ಲಿ ಯಾರು ಮುಖಂಡರು ಎಂದೇ ಗೋತ್ತಾಗುತ್ತಿಲ್ಲ. ಸರ್ಕಾರ ರಚನೆಯಾಗಿ ನಾಲ್ಕೈದು ತಿಂಗಳಾದರೂ ಈವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ದೆಹಲಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದೆ, ಆ ವೇಳೆ ನಡೆದ ಮಾತುಕತೆಯಲ್ಲಿ ರಾಜ್ಯದ ಒಬ್ಬ ಬಿಜೆಪಿ ನಾಯಕರು ಹಾಜರಿರಲಿಲ್ಲ. ಬಿಜೆಪಿ ಮನೆ ಖಾಲಿಯಾಗಿದೆ. ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕಾಗಿ ಸಿಬಿಐ, ಆದಾಯ ತೆರಿಗೆ ಛೂ ಬಿಡುವುದನ್ನು ಬಿಟ್ಟು ಇನ್ನೇನು ಮಾಡಲು ಬರುತ್ತದೆ ಅವರಿಗೆ ಎಂದು ಪ್ರಶ್ನಿಸಿದರು.
ನಾಳೆ ನಾಡಹಬ್ಬ ದಸರಾಗೆ ಚಾಲನೆ ನೀಡಲಿದ್ದಾರೆ ನಾದಬ್ರಹ್ಮ ಹಂಸಲೇಖ
ಜೆಡಿಎಸ್-ಬಿಜೆಪಿ ಬಗ್ಗೆ ಸಂಸದ ಡಿ.ವಿ.ಸದಾನಂದ ಗೌಡರು, ಮಾಜಿ ಶಾಸಕ ರೇಣುಕಾಚಾರ್ಯ ಏನು ಹೇಳಿಕೆ ನೀಡಿದ್ದಾರೆ ಎಂದು ಜನರ ಕಣ್ಣೆದುರೇ ಇದೆ. ರಾಜ್ಯ ಬಿಜೆಪಿ ನಾಯಕರು ಬೆನ್ನೆಲುಬು ಕಳೆದುಕೊಂಡಿದ್ದಾರೆ. ಅಕಾರ ಇದ್ದಾಗಲಂತೂ ರಾಜ್ಯದ ಪರವಾಗಿ ಮಾತನಾಡಲು ಆಗಿರಲಿಲ್ಲ. ಈಗ ನಮ್ಮ ಪಾಡಿಗೆ ಗೌರವವಾಗಿ ಬದುಕಲು ಬಿಡಿ ಎಂದು ಹೈಕಮಾಂಡ್ ಬಳಿ ಕೇಳಲು ಅವರಿಗೆ ಆಗುತ್ತಿಲ್ಲ ಎಂದರು.
ಹಿಂದೆ ನಾವು ದಾಖಲೆಗಳನ್ನು ಇಟ್ಟು ಆರೋಪ ಮಾಡಿದ್ದೆವು. ಅವರು ತನಿಖೆ ಮಾಡಿರಲಿಲ್ಲ. ಈಗ ಬಿಜೆಪಿಯವರು ಆರೋಪ ಮಾಡುತ್ತಾರೆ, ಮಾಡಲಿ ಆದರೆ ಆರೋಪಕ್ಕೆ ದಾಖಲೆ ಕೊಡಲಿ, ನಾವು ತನಿಖೆ ಮಾಡಲು ಸಿದ್ಧರಿದ್ದೇವೆ. ಗಾಳಿಯಲ್ಲಿ ಗುಂಡು ಹೊಡೆಯುವವರಿಗೆ ಏನು ಮಾಡಲು ಸಾಧ್ಯ ಎಂದರು. ಜನ ನಮಗೆ ಅಧಿಕಾರ ನೀಡಿರುವುದು ಉತ್ತಮ ಆಡಳಿತ ನಡೆಸಿ, ಜನರಿಗೆ ಅನುಕೂಲ ಮಾಡಿಕೊಡಲಿಕ್ಕಾಗಿ. ಬಿಜೆಪಿಯವರ ಹುಸಿ ಆರೋಪಗಳಿಗೆ ಉತ್ತರ ಹೇಳುತ್ತಾ ಕುಳಿತುಕೊಳ್ಳುವುದಿಲ್ಲ ಎಂದರು.
ಬಿಜೆಪಿಯವರಿಗೆ ತಮ್ಮ ಸರ್ಕಾರವನ್ನೇ ಉಳಿಸಿ ಕೊಳ್ಳಲಾಗಲಿಲ್ಲ. ಈಗ 135 ಶಾಸಕ ಸಂಖ್ಯಾಬಲ ಇರುವ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಾರೆ ಎಂದಾದರೆ ಮಾಡಲಿ ನಾವು ನೋಡುತ್ತೇವೆ. ರಾಜಕೀಯ ಮಾಡಲು ಅವರೊಬ್ಬರಿಗೆ ಬರುತ್ತದೆಯೇ, 100 ವರ್ಷ ನಾವು ಸುಮ್ಮನೆ ಬಂದಿದ್ದೇವೆಯೇ. ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ಅವರ ಮನೆಯನ್ನೂ ಅವರು ಸರಿಯಾಗಿ ನೋಡಿಕೊಳ್ಳಲು ಬರುತ್ತಿಲ್ಲ. ಇರುವವರನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದರು.
ಸೋಶಿಯಲ್ ಮೀಡಿಯಾದಲ್ಲಿ ಗ್ಯಾರಂಟಿ ಸರ್ಕಾರದ ಕುರಿತು ಹಿಗ್ಗಾಮುಗ್ಗಾ ಟ್ರೊಲ್
ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಮೇಲೆ ಬಿಜೆಪಿ ಆತಂಕದಲ್ಲಿದೆ. ಛತ್ತಿಸ್‍ಗಡದಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿಯ ಸಮೀಕ್ಷೆಗಳೇ ಹೇಳುತ್ತಿವೆ. ತೆಲಂಗಾಣದಲ್ಲಿ ಬಿಜೆಪಿ ಅಡ್ರೆಸ್‍ಗೆ ಇಲ್ಲ, ಮಧ್ಯ ಪ್ರದೇಶದಲ್ಲಿ ಹಾಲಿ ಮುಖ್ಯಮಂತ್ರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮೂರನೆ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಸೋಲಿನ ಭಯ ಅವರನ್ನು ಕಾಡುತ್ತಿದೆ ಎಂದರು.
ಕುಮಾರಸ್ವಾಮಿ ದೊಡ್ಡ ನಾಯಕರು, ಅನುಭವಸ್ಥರು, ಬಹುತೇಕ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಮಾತನಾಡುವಾಗ ಘನತೆಯಿಂದ ವರ್ತಿಸಬೇಕು. ನಮ್ಮಂತೆ ಹುಡುಗರ ರೀತಿ ಮಾಡನಾಡಲು ಸಾಧ್ಯವೇ. ಯಾವುದೇ ಆರೋಪ ಮಾಡಬೇಕಾದರೂ ದಾಖಲೆ ಇಟ್ಟು ಮಾತನಾಡಬೇಕಲ್ಲ ಎಂದರು.