Friday, November 22, 2024
Homeರಾಷ್ಟ್ರೀಯ | National'ಕೈ'ಬಿಟ್ಟು ಬಿಜೆಪಿ ಸೇರಿದ ಪ್ರಿಯಾಂಕಾ ಗಾಂಧಿ ಆಪ್ತ ತಜೇಂದರ್ ಸಿಂಗ್ ಬಿಟ್ಟು

‘ಕೈ’ಬಿಟ್ಟು ಬಿಜೆಪಿ ಸೇರಿದ ಪ್ರಿಯಾಂಕಾ ಗಾಂಧಿ ಆಪ್ತ ತಜೇಂದರ್ ಸಿಂಗ್ ಬಿಟ್ಟು

ನವದೆಹಲಿ,ಏ.20- ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಆಪ್ತರಾಗಿದ್ದ ತಜೇಂದರ್ ಸಿಂಗ್ ಬಿಟ್ಟು ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ ಪಕ್ಷದ ಹಿರಿಯ ನಾಯಕರ ನಿರ್ಗಮನದಿಂದ ಕಾಂಗ್ರೆಸ್‍ಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.

ಹಿಮಾಚಲಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ತೇಜೇಂದರ್ ಸಿಂಗ್‍ಬಿಟ್ಟು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ , ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಎಐಸಿಸಿ, ಹಿಮಾಚಲ ಪ್ರದೇಶದ ಸಹ-ಪ್ರಭಾರಿ ಕಾರ್ಯದರ್ಶಿ ಹುದ್ದೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಭಾರವಾದ ಹೃದಯದಿಂದ, 35 ವರ್ಷಗಳ ನಂತರ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಶೀರ್ಷಿಕೆಯೊಂದಿಗೆ ತೇಜೆಂದರ್ ತನ್ನ ರಾಜೀನಾಮೆ ಪತ್ರವನ್ನು ಫೇಸ್‍ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ಮಾರ್ಚ್‍ನಲ್ಲಿ ಕಾಂಗ್ರೆಸ್ ವಕ್ತಾರ ರೋಹನ್ ಗುಪ್ತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದ ಕೆಲವು ನಾಯಕರಿಂದ ಕಿರುಕುಳ ಮತ್ತು ಚಾರಿತ್ರ್ಯ ವಧೆಯಾಗುತ್ತಿದೆ ಎಂದು ಕಾರಣ ನೀಡಿದ್ದರು. ಅಹಮದಾಬಾದ್ ಪೂರ್ವ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ರೋಹನ್ ಗುಪ್ತಾ ಅವರನ್ನು ಹೆಸರಿಸಲಾಯಿತು. ಆದರೆ ಅವರು ಕಣದಿಂದ ಹೊರಗುಳಿದಿದ್ದಾರೆ.

ಈ ಹಿಂದೆ, ವಕ್ತಾರ ಗೌರವ್ ವಲ್ಲಭ್ ಮತ್ತು ಒಲಿಂಪಿಕ್ ಪದಕ ವಿಜೇತ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ ತೊರೆದಿದ್ದರು. ಮುಂಬೈನ ಹಿರಿಯ ನಾಯಕ ಸಂಜಯ್ ನಿರುಪಮ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಉಚ್ಚಾಟಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದ್ದರೂ ಸಹ ರಾಜೀನಾಮೆ ನೀಡಿದ್ದರು.

RELATED ARTICLES

Latest News