ಬೆಂಗಳೂರು, ಮೇ 6- ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಬಳಸದಂತೆ ಸೆಷನ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಪ್ರಕರಣಗಳ ಸುದ್ದಿ ಪ್ರಸಾರ ಮಾಡುವಾಗ ಅನಗತ್ಯವಾಗಿ ತಮ್ಮ ಹೆಸರು ಬಳಸದಂತೆ ಕೋರಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸೆಷನ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಹಾಗೂ ಮಾಜಿ ಸಚಿವ ರೇವಣ್ಣ ವಿರುದ್ಧದ ಮಹಿಳಾ ಅಪಹರಣ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಕೆಸರೆರಚಾಟಕ್ಕೂ ಕಾರಣವಾಗಿದೆ.ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸಿ ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಅನಗತ್ಯವಾಗಿ ಈ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರು ನ್ಯಾಯಾಲದ ಮೊರೆ ಹೋಗಿದ್ದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ದೇವೇಗೌಡರ ಹೆಸರು ಬಳಸಿದಿರಿ :
ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣದಲ್ಲಿ ವಿನಾ ಕಾರಣ ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ಬಳಸಬಾರದು ಎಂದು ಒಕ್ಕಲಿಗ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಸಿ. ಗಂಗಾಧರ್ ಒತ್ತಾಯಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಾಸನದ ಪೆನ್‌ಡ್ರೈವ್ ಜಂಜಾಟದಲ್ಲಿ ಮಾಜಿ ಪ್ರಧಾನಿ ಹೆಸರು ಬಳಸುವುದರಿಂದ ದೇವೇಗೌಡರ ಮನಸ್ಸಿಗೆ ನೋವುಂಟಾಗಲಿದೆ. ಹಾಗಾಗಿ ಯಾರೂ ಸಹ ಅವರ ಹೆಸರನ್ನು ಬಳಸಬಾರದು ಎಂದು ಮನವಿ ಮಾಡಿದರು.
ಪಕ್ಷಾತೀತವಾಗಿ ರಾಜಕೀಯ ನಾಯಕರು ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎಸ್‌ಐಟಿ ಮೂಲಕ ಪಕ್ಷಾತೀತವಾಗಿ ತನಿಖೆ ನಡೆಸಿ ರಾಜ್ಯಸರ್ಕಾರ ಸತ್ಯಾಂಶವನ್ನು ಜನತೆಯ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.
ಬಸವನಗುಡಿಯ ರೇವಣ್ಣ ಮನೆಯಲ್ಲಿ ಸ್ಥಳ ಮಹಜರು
ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‌ಐಟಿ ಇಂದು ನಗರದ ಬಸವನಗುಡಿಯ ರೇವಣ್ಣ ಅವರ ನಿವಾಸಕ್ಕೆ ತೆರಳಿ ಸ್ಥಳ ಮಹಜರು ನಡೆಸಿತು. ಮೂವರು ಮಹಿಳಾ ಆಧಿಕಾರಿಗಳು ಸೇರಿದಂತೆ ಆರು ಮಂದಿಯ ತಂಡ ಸಂತ್ರಸ್ತೆಯನ್ನು ಬಸವನಗುಡಿಯ ರೇವಣ್ಣ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದೊಯ್ದು ಪರಿಶೀಲನೆ ನಡೆಸಿತು. ಸಂತ್ರಸ್ತೆಯ ಸಮ್ಮುಖದಲ್ಲಿ ಮಹಜರು ನಡೆಸಿ ಆಕೆಯ ಹೇಳಿಕೆಯನ್ನು ಅಽಕಾರಿಗಳು ದಾಖಲಿಸಿಕೊಂಡರು. ಈ ವೇಳೆ ಮನೆ ಬಳಿ ಯಾರೂ ಬಾರದಂತೆ ಬಿಗಿ ಪೊಲೀಸ್ ಬಂದೋಬಸ್‌್ತ ಮಾಡಲಾಗಿತ್ತು.