Sunday, May 19, 2024
Homeರಾಜ್ಯಚಿನ್ನದ ಬೆಲೆ ಏರಿಕೆ ನಡುವೆಯೇ ಬಂತು ಅಕ್ಷಯ ತೃತೀಯ

ಚಿನ್ನದ ಬೆಲೆ ಏರಿಕೆ ನಡುವೆಯೇ ಬಂತು ಅಕ್ಷಯ ತೃತೀಯ

ಎಂ. ಕೃಷ್ಣಪ್ಪ, ಚಿಕ್ಕಬಳ್ಳಾಪುರ
ಇದೇ ಮೆ 10 ರಂದು ಅಕ್ಷಯ ತೃತೀಯ. ಈ ಹಬ್ಬಕ್ಕೆ ಋಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ದಿನ ಹೊಸ ವಸ್ತುಗಳನ್ನು ಖರೀದಿಸುವ ಮೂಲಕ, ದಾನ ಮಾಡುವ ಮೂಲಕ ಅಕ್ಷಯ ತೃತೀಯವನ್ನು ಆಚರಿಸುತ್ತಾರೆ. ಅಕ್ಷಯ ತೃತೀಯ ಪೌರಾಣಿಕ ಮಹತ್ವವನ್ನು ಹೊಂದಿರುವ ಹಬ್ಬವೂ ಹೌದು ಇತ್ತೀಚಿನ ಕೆಲ ವರ್ಷಗಳಂತೆ ಪ್ರಸಕ್ತ ಸಾಲಿನಲ್ಲೂ ಹೊಸ ವಸ್ತು ಬಂಗಾರ ಕೊಳ್ಳಲು ಜನ ಮುಗಿ ಬೀಳಬಹುದು ಎಂಬ ಹಿನ್ನೆಲೆಯಲ್ಲಿ ವಿವಿಧ ತೆರನಾದ ವಸ್ತುಗಳಿಗೆ ಚಿಕ್ಕಬಳ್ಳಾಪುರ ನಗರದ ಬಜಾರ್‌ ರಸ್ತೆ ಹಾಗೂ ಬಂಗಾರ ಕೊಳ್ಳಲು ಗಂಗಮ್ಮನ ಗುಡಿ ರಸ್ತೆ ಸರ್ವಸನ್ನದ್ಧವಾಗ ತೊಡಗಿದೆ.

ಪ್ರತಿ ವರ್ಷ ವೈಶಾಖ ಮಾಸದಲ್ಲಿ ಮಹಿಳೆಯರಿಗೆ ಅಚ್ಚುಮೆಚ್ಚಿನ ಬಂಗಾರ ತನ್ನದಾಗಿಸುವ ಸಡಗರ ಸಂಭ್ರಮದ ಹಬ್ಬ ಅಕ್ಷಯ ತೃತೀಯ. ಆದರೆ ಈ ವರ್ಷ ಬಂಗಾರದ ಬೆಲೆ ಗಗನಕ್ಕೆ ಏರಿದ್ದು ಈ ಬಾರಿ ಬಂಗಾರ ಕೊಳ್ಳುವವರಲ್ಲಿ ನಿರುತ್ಸಾಹ ಮೂಡಿಸಿದೆ.

ಅಕ್ಷಯ ತೃತೀಯ ದಿನದಂದು ಹೊಸದಾಗಿ ಖರೀದಿಸಿದ ಬಂಗಾರದ ಒಡವೆಗಳನ್ನು ಲಕ್ಷ್ಮೀದೇವಿ ಮುಂದಿಟ್ಟು ಪೂಜೆ ಸಲ್ಲಿಸಿದರೆ ಅಂತಹವರ ಮನೆಗಳಲ್ಲಿ ಬಂಗಾರ ಇನ್ನಷ್ಟು ಮತ್ತಷ್ಟು ವೃದ್ಧಿಯಾಗುತ್ತದೆ ಮತ್ತು ಲಕ್ಷ್ಮೀದೇವಿ ಕೃಪೆಯಿಂದ ಸಿರಿ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತಿರುವ ಕಾರಣ ಬಂಗಾರದ ಅಂಗಡಿಗಳಿಗೆ ಜನ ಆ ದಿನ ಮುಗಿಬಿದ್ದು ಖರೀದಿಸುವುದು ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.

ಆದರೆ ಈ ವರ್ಷ ಬಂಗಾರದ ಬೆಲೆ ಸಾರ್ವಕಾಲಿಕ ದಾಖಲೆ ಏರಿಕೆಯ ಪರಿಣಾಮ ಒಂದು ಗ್ರಾಂ ಚಿನ್ನಕ್ಕೆ ಏಳು ಸಾವಿರಕ್ಕೂ ಅಧಿಕ ಮೌಲ್ಯ ಆಗಿದ್ದು ಬಂಗಾರ ಕೊಳ್ಳಲು ಸಾಧ್ಯವಾಗದೆ ಮಧ್ಯಮ ವರ್ಗದ ಜನತೆ ಚಡಪಡಿಸುತ್ತಿದ್ದಾರೆ. ಒಮ್ಮೆ ಬಂಗಾರ ಕೊಂಡರೆ ಅದನ್ನು ಅವರ ಜೀವಮಾನ ಪರ್ಯಂತ ಇಟ್ಟುಕೊಳ್ಳೋದು ಹಾಗೂ ಎಂದೂ ಒಳಪನ್ನ ಕಳೆದುಕೊಳ್ಳದ ಹಾಗೂ ಕಷ್ಟಕಾಲದಲ್ಲಿ ಕ್ಷಣಮಾತ್ರದಲ್ಲಿ ಹಣ ಒದಗಿಸಿಕೊಡುವ ಏಕೈಕ ಹಳದಿ ಲೋಹ ಆಗಿರುವುದು ವಿಶೇಷವಾಗಿದೆ.

ಹಳ್ಳಿಗಾಡಿನ ಗಿರವಿ ಅಂಗಡಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಬ್ಯಾಂಕ್‌ ವಹಿವಾಟಿನ ತನಕ ಷೇರು ಮಾರುಕಟ್ಟೆಯಲ್ಲಿನ ಏರುಪೇರುಗಳಿಗೂ ಸಹ ಬಂಗಾರದ ಬೆಲೆಯೇ ಮಾನದಂಡವಾಗಲಿದೆ. ಇದಿಷ್ಟೇ ಅಲ್ಲದೆ ದೇಶದಲ್ಲಿ ನೋಟುಗಳನ್ನು ಮುದ್ರಿಸಲು ಸಹ ಇಂತಿಷ್ಟು ಬಂಗಾರವನ್ನು ಕೇಂದ್ರ ಸರ್ಕಾರ ಸಂಗ್ರಹಿಸಬೇಕು ಎಂಬ ನಿಯಮವೂ ಇದೆ ಹಾಗಾಗಿ ಬಂಗಾರ ಎಂದರೆ ಎಲ್ಲರಿಗೂ ಅಷ್ಟೊಂದು ಪ್ರೆತಿ.

ಕೂಲಿ ಮಾಡುವವರಿಂದ ಹಿಡಿದು ದೇಶದ ಆಗರ್ಭ ಶ್ರೀಮಂತರ ತನಕ ಬಂಗಾರದ ಪ್ರದರ್ಶನ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಅವರವರ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ . ಉದಾಹರಣೆಗೆ ಕಡು ಬಡವರು ಮದುವೆ ಮಾಡಿಕೊಟ್ಟರೆ ಕನಿಷ್ಠ ಚಿನ್ನದ ಬೆಲೆಯನ್ನಾದರೂ ಕೊಡಲೇಬೇಕು ಅದರೊಂದಿಗೆ ಮದುಮಗ ಹಾಗೂ ಮದುಮಗಳಿಗೂ ತಮ್ಮ ಕೈಲಾದಷ್ಟು ಚಿನ್ನವನ್ನು ಒಡವೆ ರೂಪದಲ್ಲಿ ಕೊಡುತ್ತಾರೆ. ಹಾಗಾಗಿ ದೇಶದ ಜನರಲ್ಲಿ ಪ್ರತಿಯೊಬ್ಬರಿಗೂ ಬಂಗಾರ ಕೊಳ್ಳುವಿಕೆ ಅನಿವಾರ್ಯವಾಗಿದೆ.

ವಿವಾಹ ಸಮಾರಂಭ, ಆಸ್ತಿ ಖರೀದಿ, ಅನಾರೋಗ್ಯ ಸಂದರ್ಭ, ಮಕ್ಕಳ ವಿದ್ಯಾಭ್ಯಾಸ , ಮನೆ ಕಟ್ಟುವಿಕೆ ಈ ರೀತಿಯ ನಾನಾ ಕಾರಣಗಳಿಂದ ಬಂಗಾರ ಇದ್ದರೆ ಯಾರನ್ನೂ ಕಾಡಿ ಬೇಡದೆ ತನ್ನ ಒಡವೆ ಅಡಮಾನ ಇಟ್ಟು ತಮಗೆ ಬೇಕಿರುವಷ್ಟು ಹಣ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಬಂಗಾರ ಕಷ್ಟಕ್ಕೆ ಆಗುವ ನಂಟ ಎಂದು ಶ್ರೀಸಾಮಾನ್ಯರು ತಿಳಿದುಕೊಳ್ಳುವುದರಿಂದಲೇ ಬಂಗಾರಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಡಿವ್ಯಾಂಡ್‌ ಎಂದರೂ ತಪ್ಪಾಗಲಾರದು.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಅಲ್ಪಸ್ವಲ್ಪ ಏರಿಳಿಕೆ ಹೊರತುಪಡಿಸಿದರೆ ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆಕಂಡು ಬಂದಿದೆಯೇ ಹೊರತು ಯಾವುದೇ ಸಂದರ್ಭದಲ್ಲಿ ಇಳಿಮುಖ ಕಂಡಿಲ್ಲ ಹಾಗಾಗಿ, ಮಾರುಕಟ್ಟೆಯಲ್ಲಿಯೂ ಬಂಗಾರ ತನ್ನ ಸ್ಥಿರತೆಯನ್ನು ಕಂಡುಕೊಂಡಿದೆ.

ಸಾಲ ಮಾಡಿ ಆದರೂ ತುಪ್ಪ ತಿನ್ನು ಎಂಬ ಗಾದೆ ಮಾತಿನಂತೆ ಬಂಗಾರಕೊಳ್ಳುವ ಆತುರದಲ್ಲಿ ಮಧ್ಯಮ ವರ್ಗದವರು ಹರ ಸಾಹಸ ಪಟ್ಟು ಸಾಲ-ಸೋಲಮಾಡಿ ಅಕ್ಷಯ ತೃತೀಯ ದಿನಕ್ಕೆ ಒಂದೆರಡು ಗ್ರಾಮ್‌ ಆದರೂ ಸಹ ಬಂಗಾರ ಕೊಳ್ಳಲು ಚಿನ್ನದ ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಈ ವರ್ಷ ಮೇ 10ರಂದು ಅಕ್ಷಯ ತೃತೀಯ ಬರುವ ಹಿನ್ನೆಲೆಯಲ್ಲಿ ಬಂಗಾರಕ್ಕೆ ಮತ್ತಷ್ಟು ಬೇಡಿಕೆ ಕಂಡು ಬರುವುದರಲ್ಲೂ ಆಶ್ಚರ್ಯವಿಲ್ಲ.

RELATED ARTICLES

Latest News