Sunday, May 19, 2024
Homeಬೆಂಗಳೂರುಅಂಬೇಡ್ಕರ್‌ ಕಾಲೇಜಿನಲ್ಲಿ "ದೊಡ್ಡಮನಿ ಗೋಲ್‌ಮಾಲ್‌" : ಸಿಬಿಐಗೆ ಎನ್‌ಆರ್‌ಆರ್‌ ದೂರು

ಅಂಬೇಡ್ಕರ್‌ ಕಾಲೇಜಿನಲ್ಲಿ “ದೊಡ್ಡಮನಿ ಗೋಲ್‌ಮಾಲ್‌” : ಸಿಬಿಐಗೆ ಎನ್‌ಆರ್‌ಆರ್‌ ದೂರು

ಬೆಂಗಳೂರು,ಮೇ.6- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಹಾಗೂ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಧಾಕೃಷ್ಣ ದೊಡ್ಡಮನಿ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಮೆಡಿಕಲ್‌ ಕಾಲೇಜು ಹಾಗೂ ಎಂ.ಆರ್‌.ಅಂಬೇಡ್ಕರ್‌ ಡೆಂಟಲ್‌ ಕಾಲೇಜುಗಳಲ್ಲಿ ನೂರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಸಿಬಿಐಗೆ ದೂರು ನೀಡಿದ್ದಾರೆ.

ದೊಡ್ಡಮನಿ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಮೆಡಿಕಲ್‌ ಕಾಲೇಜ್‌ ಹಾಗೂ ಎಂ.ಆರ್‌.ಅಂಬೇಡ್ಕರ್‌ ಡೆಂಟಲ್‌ ಕಾಲೇಜುಗಳ ಆಡಳಿತ ಮಂಡಳಿ ಮುಖ್ಯಸ್ಥರಾಗಿದ್ದು ಅವರು ಎಂಬಿಬಿಎಸ್‌‍ ಹಾಗೂ ಬಿಡಿಎಸ್‌‍ ಪದವಿ ತರಗತಿಗಳ ಅಡಿಷನ್‌ ಹೆಸರಿನಲ್ಲಿ ಕೋಟ್ಯಂತರ ರೂ.ಅವ್ಯವಹಾರ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಬಿಐಗೆ ಬರೆದಿರುವ 900 ಪುಟಗಳ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ರಾಧಾಕಷ್ಣ ದೊಡ್ಡಮನಿ, ಗುರಪ್ಪಾಜಿ, ಹೆಚ್‌.ಎಸ್‌‍.ಮಹದೇವ ಪ್ರಸಾಡ್‌, ಡಾ॥ ಎನ್‌. ಟಿ. ಮುರಳಿ ಮೋಹನ್‌, ವಿ. ಎಸ್‌‍. ಕುಬೇರ್‌ ಮತ್ತು ಅಮಾನುಲ್ಲಾ ಖಾನ್‌ ಅವರುಗಳ ವಿರುದ್ಧ ಸಿಬಿಐ ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಗಳಲ್ಲಿ ಎನ್‌.ಆರ್‌.ರಮೇಶ್‌ ದೂರು ದಾಖಲಿಸಿದ್ದಾರೆ.

ರಾಜ್ಯದ ಮೆಡಿಕಲ್‌ ಕಾಲೇಜುಗಳು ಮತ್ತು ಡೆಂಟಲ್‌ ಕಾಲೇಜುಗಳ ಇತಿಹಾಸದಲ್ಲಿಯೇ ಅತೀ ದೊಡ್ಡದಾದ ಹಗರಣ ಎಂದು ಬಣ್ಣಿಸಿರುವ ಅವರು ದ್ವಿತೀಯ ಪಿಯುಸಿ ತರಗತಿಯಲ್ಲಿ ಅನುತ್ತೀರ್ಣರಾದ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಅನರ್ಹರಾದ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಂದ ಎರಡು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಡೊನೆಷನ್‌ ರೂಪದಲ್ಲಿ ಪಡೆದು ಅವರಿಗೆ ನಕಲಿ ಅಂಕಪಟ್ಟಿ ತಯಾರಿಸಿ ಪ್ರವೇಶ ಕೊಡಿಸುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ರಮೇಶ್‌ ಆರೋಪಿಸಿದ್ದಾರೆ.

ಶ್ರೀಮಂತ ಕುಟುಂಬಗಳ ಅನುತ್ತೀರ್ಣ ಇಲ್ಲವೇ ಅನರ್ಹ ವಿದ್ಯಾರ್ಥಿಗಳಿಗೆ ಜಾರ್ಖಂಡ್‌ ರಾಜ್ಯದ ಅನಾಮಿಕ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಂತೆ ದಾಖಲೆಗಳನ್ನು ಸಷ್ಟಿಸಿ, ಕಾನೂನು ಬಾಹಿರ ಪ್ರವೇಶಗಳನ್ನು ನೀಡಿರುವ ಆರೋಪ ಮಾಡಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಸಿಎಂ ಗುಂಡೂರಾವ್‌ ಅಂದಿನ ಕೇಂದ್ರ ಸಚಿವರಾಗಿದ್ದ. ವಿ. ಶಂಕರಾನಂದ, ರಾಜ್ಯದ ಸಚಿವರಾಗಿದ್ದ ವಿ. ಬಸವಲಿಂಗಪ್ಪ, ಬಿ. ರಾಚಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರರಂತಹ ಮಹಾ ಗಣ್ಯರಿಂದ 1980-81 ರಲ್ಲಿ ಚಾಲನೆಗೊಂಡಿರುವ ಆನಂದ ಸೋಷಿಯಲ್‌ ಮತ್ತು ಎಜುಕೇಷನ್‌ ಟ್ರಸ್ಟ್‌ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಬಿ. ಆರ್‌. ಅಂಬೇಡ್ಕರ್‌ ಮೆಡಿಕಲ್‌ ಕಾಲೇಜು ಮತ್ತು ಡಾ. ಎಂ. ಆರ್‌. ಅಂಬೇಡ್ಕರ್‌ ಡೆಂಟಲ್‌ ಮತ್ತು ನರ್ಸಿಂಗ್‌ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ರಾಧಾಕಷ್ಣ ದೊಡ್ಡಮನಿ ಅವರು ಈ ಸಂಸ್ಥೆಗಳ ಧರ್ಮದರ್ಶಿಯಾಗಿ ನಿಯೋಜನೆಗೊಂಡ ನಂತರ ಯಾವುದೇ ಎಗ್ಗಿಲ್ಲದೇ ಅಪಾರ ಪ್ರಮಾಣದ ವಂಚನೆ ಮತ್ತು ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಛದಲ್ಲಿ ಅತ್ಯುನ್ನತ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಒದಗಿಸುವ ಸದುದ್ದೇಶದಿಂದ ಪ್ರಾರಂಭವಾದ ಸದರಿ ಸಂಸ್ಥೆಗಳು ಸಂಸ್ಥಾಪಕ ಧರ್ಮದರ್ಶಿಗಳಾಗಿದ್ದ ದಿ. ಹೆಚ್‌‍. ಎಸ್‌‍. ಶಿವಸ್ವಾಮಿ, ಡಾ.ಎನ್‌. ಟಿ. ಮೋಹನ್‌ ಮತ್ತು ದಿ. ಡಾ,ಎಲ್‌‍. ಶಿವಲಿಂಗಂಯ್ಯ ಅವರ ನೇತತ್ವದಲ್ಲಿ ಪ್ರಾರಂಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು.

ಇವರ ಕಾಲ ನಂತರ ಇಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕಷ್ಣ ದೊಡ್ಡಮನಿ, ಹೆಚ್‌. ಎಸ್‌‍. ಮಹದೇವ ಪ್ರಸಾದ್‌ ಹಾಗೂ ಡಾ.ಎನ್‌. ಟಿ. ಮುರಳಿ ಮೋಹನ್‌ ಅವರುಗಳನ್ನು ಕಾಲೇಜುಗಳ ಧರ್ಮದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.

ಇ ದೇ ಸಂಸ್ಥೆಯಲ್ಲಿ ನಾಲ್ಕನೇ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ಅಮಾನುಲ್ಲಾ ಖಾನ್‌ ಎಂಬ ಪರಮ ಭ್ರಷ್ಟನನ್ನು ರಾಧಾಕಷ್ಣ ದೊಡ್ಡಮನಿ ಮತ್ತವರ ತಂಡ ಕಾನೂನು ಬಾಹಿರವಾಗಿ ಸದರಿ ಶಿಕ್ಷಣ ಸಂಸ್ಥೆಗಳ ಪಿಆರ್‌ಓ ಆಗಿ ನೇಮಕ ಮಾಡಿಕೊಂಡಿರುತ್ತಾರೆ. ನಿಯಮಬಾಹಿರವಾಗಿ ಪಿಆರ್‌ಓ ಸ್ಥಾನಕ್ಕೆ ನಿಯೋಜನೆಗೊಂಡ ಅಮಾನುಲ್ಲಾ ಖಾನ್‌ ನಿಂದ ಸಾವಿರಾರು ಕಾನೂನು ಬಾಹಿರ ಚಟುವಟಿಕೆಗಳು ನಡೆದಿರುತ್ತವೆ.

ರಾಜ್ಯ ಮತ್ತು ದೇಶದ ವಿವಿಧೆಡೆಗಳಿಂದ ಶ್ರೀಮಂತ ಕುಟುಂಬಗಳ ದ್ವಿತೀಯ ಪಿಯುಸಿ ಅನುತ್ತೀರ್ಣ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಅನರ್ಹಗೊಂಡ ವಿದ್ಯಾರ್ಥಿಗಳನ್ನು ಹುಡುಕಿ ತಂದು ಎಂಬಿಬಿಎಸ್‌‍ ಹಾಗೂ ಬಿಡಿಎಸ್‌‍ ಪದವಿ ತರಗತಿಗಳಿಗೆ ಪ್ರವೇಶ ಕೊಡಿಸುವ ವಂಚನೆ ಕಾರ್ಯಗಳಲ್ಲಿ ಅಮಾನುಲ್ಲಾ ಖಾನ್‌ ತೊಡಗಿದ್ದಾನೆ ಮಾತ್ರವಲ್ಲ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಸ್ವಂತ ಮೆಡಿಕಲ್‌ ಕಾಲೇಜ್‌ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಎಲ್ಲಾ ಹಗರಣಗಳಿಗೆ ಸಂಬಂಧಿಸಿದಂತೆ ಸದರಿ ಶಿಕ್ಷಣ ಸಂಸ್ಥೆಗಳ ನೌಕಕರ ಸಂಘದ ಸದಸ್ಯರು ಸೇರಿದಂತೆ ಹಲವಾರು ಹೋರಾಟಗಾರರು ಮತ್ತು ಸ್ವತಃ ಆಡಳಿತ ಮಂಡಳಿಯ ಕೆಲವು ನಿಷ್ಠಾವಂತ ಸದಸ್ಯರು ರಾಜ್ಯದ ಘನತೆವೆತ್ತ ರಾಜ್ಯಪಾಲರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ಹಲವಾರು ಬಾರಿ ದಾಖಲೆಗಳ ಸಹಿತ ದೂರು ನೀಡಿರುತ್ತಾರೆ. ಅಲ್ಲದೇ, ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನೂ ಸಹ ದಾಖಲಿಸಿರುತ್ತಾರೆ.

ಅತ್ಯಂತ ಪ್ರಭಾವಶಾಲಿಗಳಾಗಿರುವ ರಾಧಾಕಷ್ಣ ದೊಡ್ಡಮನಿ ಮತ್ತವರ ತಂಡ ಕಾನೂನಿನಲ್ಲಿರುವ ಲೋಪದೋಷಗಳನ್ನು ತಮಗೆ ಬೇಕಾದ ಹಾಗೆ ಪರಿವರ್ತಿಸಿಕೊಂಡು ಕಾನೂನಿಗೆ ಮಣ್ಣೆರೆಚುವ ಕೆಲಸವನ್ನು ಮಾಡುತ್ತಿದ್ದಾರೆ. ಸದರಿ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಹೋರಾಟದ ಫಲವಾಗಿ ನಿವತ್ತ ನ್ಯಾಯಮೂರ್ತಿ ಎಸ್‌‍.ಆರ್‌. ವೆಂಕಟೇಶ್‌ ಮೂರ್ತಿ ರವರನ್ನು ರಾಜ್ಯ ಸರ್ಕಾರವು 2004 ರಲ್ಲಿ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿತ್ತು.ನಂತರ ಆಡಳಿತಾಧಿಕಾರಿಗಳು 2008-09 ರಲ್ಲಿ ಬಿ. ಎಲ್‌‍. ನಂಜುಂಡಸ್ವಾಮಿ, ಎಂ ಕೆ. ಕೆಂಪಸಿದ್ದಯ್ಯ, ಎಂ. ಗುರಪ್ಪಾಜಿ ಮತ್ತು ವಿ. ಎಸ್‌‍. ಕುಬೇರ್‌ ರವರುಗಳನ್ನು ಕಾಲೇಜು ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನಿಯೋಜಿಸಿ ಆದೇಶ ಹೊರಡಿಸಿರುತ್ತಾರೆ.

ಆಡಳಿತಾಧಿಕಾರಿಗಳ ಅವಧಿ ಮುಗಿದ ನಂತರ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ರೀತ್ಯಾ ನಿಯೋಜನೆಗೊಂಡ ಮೂರು ಮಂದಿ ಧರ್ಮದರ್ಶಿಗಳ ಮೇಲೆ ತೀವ್ರವಾದ ಒತ್ತಡ ಹೇರಿ ರಾಧಾಕಷ್ಣ ದೊಡ್ಡಮನಿ ಮತ್ತವರ ತಂಡದ ಸದಸ್ಯರನ್ನು ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನೇಮಕ ಮಾಡಿಕೊಳ್ಳಲಾಗಿರುತ್ತದೆ.

ಕಳೆದ 15 ವರ್ಷಗಳಿಂದ ನಿರಂತರವಾಗಿ ಅಕ್ರಮ ಪ್ರವೇಶಗಳ ಮೂಲಕ ನೂರಾರು ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರವನ್ನು ನಡೆಸಿರುವ ರಾಧಾಕಷ್ಣ ದೊಡ್ಡಮನಿ, ಗುರಪ್ಪಾಜಿ, ಮಹದೇವ ಪ್ರಸಾದ್‌, ಮುರಳಿ ಮೋಹನ್‌, ವಿ. ಎಸ್‌‍. ಕುಬೇರ್‌ ಹಾಗೂ ಅಮಾನುಲ್ಲಾ ಖಾನ್‌ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಧರ್ಮದರ್ಶಿಗಳ ವಿರುದ್ಧ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ರಮೇಶ್‌ ಪತ್ರ ಬರೆದಿದ್ದಾರೆ.

RELATED ARTICLES

Latest News