Thursday, December 26, 2024
Homeರಾಜ್ಯ50 ಗ್ರಾಮಪಂಚಾಯ್ತಿಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ

50 ಗ್ರಾಮಪಂಚಾಯ್ತಿಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ

Proposal to upgrade 50 gram panchayats to municipalities

ಬೆಳಗಾವಿ,ಡಿ.13- ರಾಜ್ಯದಲ್ಲಿ 50 ಗ್ರಾಮಪಂಚಾಯ್ತಿಗಳನ್ನು, ಪಟ್ಟಣ ಪಂಚಾಯ್ತಿಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಇದ್ದು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್‌‍.ಸುರೇಶ್‌ ವಿಧಾನಸಭೆಗಿಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದಿನಕರ್‌ ಕೇಶವ ಶೆಟ್ಟಿ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಅವರು ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅವರು 2011ರ ಜನಗಣತಿ ಪ್ರಕಾರ ಮೇಲ್ದರ್ಜೆಗೇರಿಸಲು ಅವಕಾಶವಿಲ್ಲ. ಆದರೆ ಗೋಕರ್ಣಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದು ನಿಜ.

ಗೋಕರ್ಣದ ಬಗ್ಗೆ ನಮಗೂ ವಿಶೇಷವಾದ ಪ್ರೀತಿ ಇದೆ. ಆದರೆ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ರಾಜ್ಯಾದ್ಯಂತ ಒಂದೇ ಮಾನದಂಡವಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೊದಲ ಆದ್ಯತೆಯಲ್ಲೇ ಮೇಲ್ದರ್ಜೆಗೇರಿಸಲು ಗಮನ ಕೊಡಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ತಿಳಿಸಿದರು.

2011ರ ಜನಗಣತಿಯ ಪ್ರಕಾರ 13539 ಜನಸಂಖ್ಯೆ ಇದೆ. 2015, ಮಾರ್ಚ್‌ 19ರ ಸಚಿವ ಸಂಪುಟದಲ್ಲಿ, 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಅರ್ಹ ಗ್ರಾಮಪಂಚಾಯ್ತಿಗಳನ್ನು ಮಾತ್ರ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಗೋಕರ್ಣ ಗ್ರಾಪಂ ನಿಗದಿತ ಮಾನದಂಡವನ್ನು ಪೂರೈಸುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಜಯೇಂದ್ರ, ಜನಗಣತಿ ಮಾನದಂಡವೆಂದು ಪರಿಗಣಿಸಿದರೆ ಗೋಕರ್ಣವನ್ನು ಮೇಲ್ದರ್ಜೆಗೇರಿಸಲು ಸಾಧ್ಯವಿಲ್ಲ. ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ. ಆದ್ಯತೆ ಮೇಲೆ ಪರಿಗಣಿಸಿ ಎಂದರು. ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಮಾತನಾಡಿ, ಪ್ರವಾಸಿಗರು ಹೆಚ್ಚು ಆಗಮಿಸುವ ಪ್ರವಾಸಿ ತಾಣಗಳನ್ನು ಮೇಲ್ದರ್ಜೆಗೇರಿಸಲು ಮೊದಲ ಆದ್ಯತೆ ನೀಡಿ ಪರಿಗಣಿಸಿದರೆ ಸರ್ಕಾರಕ್ಕೂ ಗೌರವ ಬರುತ್ತದೆ ಎಂದರು. ಬಿಜೆಪಿ ಶಾಸಕರಾದ ಪ್ರಭು ಚವ್ಹಾಣ್‌, ಭೈರತಿ ಬಸವರಾಜ್‌ ಮೊದಲಾದವರು ಧ್ವನಿಗೂಡಿಸಿ ಮಾತನಾಡಿದರು.

ದಿನಕರ್‌ ಶೆಟ್ಟಿ ಮಾತನಾಡಿ, ಆರ್ಥಿಕ ಸಂಪನೂಲ ಲಭ್ಯತೆ ಆಧರಿಸಿ ಮಾಡುತ್ತೇವೆ ಎಂದು ಹೇಳಿದ ಮೇಲೆ ಸರ್ಕಾರದಲ್ಲಿ ಹಣದ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಂಡಂತಾಯಿತಲ್ಲವೇ ಎಂದು ಸಚಿವ ಸುರೇಶ್‌ ಅವರನ್ನು ಪ್ರಶ್ನಿಸಿದರು. ಕಾಂಗ್ರೆಸ್‌‍ ಶಾಸಕ ಎಸ್‌‍.ಎನ್‌.ನಾರಾಯಣಸ್ವಾಮಿ ಮಾತನಾಡಿ, 2011ರ ಜನಸಂಖ್ಯೆ ಆಧರಿಸುವ ಮಾನದಂಡ ಸರಿಯಲ್ಲ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನಸಂಖ್ಯೆ 10 ಪಟ್ಟು ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಹೇಳಿದರು.

RELATED ARTICLES

Latest News