ಬೆಂಗಳೂರು,ಆ.29- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ತನಿಖೆ ಹಾಗೂ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ಹೈಕೋರ್ಟ್ನಲ್ಲಿ ನಡೆಯಲಿದೆ.
ಕಳೆದ ಆ.19 ರಂದು ನಡೆದಿದ್ದ ವಿಚಾರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದಿಷ್ಟು ರಿಯಾಯಿತಿಗಳು ದೊರೆತಿದ್ದವು. ಮುಂದಿನ ವಿಚಾರಣೆಯ ದಿನಾಂಕ ನಿಗದಿಯಾಗಿರುವಂತೆ ಇಂದು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ನ ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಸಿದ್ದರಾಮಯ್ಯ ಅವರ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ, ಪ್ರೊ.ರವಿವರ್ಮ ಕುಮಾರ್ ಹಾಗೂ ಇತರ ವಕೀಲರು ವಾದ ಮಂಡಿಸಲಿದ್ದಾರೆ. ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಎ.ಎಸ್.ಪೊನ್ನಣ್ಣ ಪ್ರಕರಣದ ನಿಗಾವಣೆ ವಹಿಸಿದ್ದಾರೆ. ರಾಜ್ಯಪಾಲರು ಪೂರ್ವಾನುಮತಿ ನೀಡಿರುವ ಹಲವು ಪ್ರಕರಣಗಳ ತೀರ್ಪುಗಳನ್ನು ಇಂದು ಉಲ್ಲೇಖಿಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ.
ರಾಜ್ಯಪಾಲರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಹಾಗೂ ಭಾರತೀಯ ನ್ಯಾಯ ಸಂಹಿತೆ 218 ರಡಿ ಪೂರ್ವಾನುಮತಿ ನೀಡಿದ್ದರು. ಈ ಹಿಂದಿನ ವಿಚಾರಣೆಯಲ್ಲಿ ಪ್ರತಿವಾದಿಗಳಿಗೆ ನೋಟೀಸ್ ನೀಡಿತ್ತು. ಅದರ ಅನುಸಾರ ಪ್ರತಿವಾದಿಗಳಾದ ಟಿ.ಜೆ.ಅಬ್ರಹಾಂ, ಪ್ರದೀಪ್ ಕುಮಾರ್ ಅವರು ತಮ ಉತ್ತರವನ್ನು ಸಲ್ಲಿಸಿದ್ದಾರೆ.
5ನೇ ಪ್ರತಿವಾದಿಯಾಗಿರುವ ಸ್ನೇಹಮಯಿ ಕೃಷ್ಣ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉತ್ತರ ನೀಡಿಲ್ಲ ಎಂದು ಹೇಳಲಾಗಿದೆ. ಸಾಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯಪಾಲರು ಹೈಕೋರ್ಟ್ ನೋಟೀಸ್ಗೆ ಉತ್ತರ ನೀಡಬೇಕೇ? ಬೇಡವೇ ಎಂಬ ಜಿಜ್ಞಾಸೆ ಕೂಡ ಮೂಡಿದೆ.
ಪ್ರತಿವಾದಿಗಳ ಉತ್ತರದ ಆಧಾರದ ಮೇಲೆ ಸಿದ್ದರಾಮಯ್ಯ ಅವರ ಪರ ವಕೀಲರು ರಿಜಾಯಿಂಡರ್ ಸಲ್ಲಿಸಲು ತಯಾರಿ ನಡೆಸಿವೆ.
ಅಭಿಷೇಕ್ ಮನುಷಿಂಘ್ವಿಯವರು ಇಂದಿನ ವಿಚಾರಣೆಯಲ್ಲಿ ಪ್ರಕರಣದ ವಾಸ್ತವಾಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿಯವರು ಯಾವುದೇ ತಪ್ಪು ಮಾಡಿಲ್ಲ, ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬೀರಿಲ್ಲ, ಹಾಗಿದ್ದರೂ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ ಮತ್ತು ರಾಜಕೀಯ ದ್ವೇಷಕ್ಕಾಗಿ ತನಿಖೆಗೆ ಪೂರ್ವಾನುಮತಿ ನೀಡಲಾಗಿದೆ ಎಂದು ವಾದಿಸುವ ಸಾಧ್ಯತೆಯಿದೆ.
ಅಧಿಕಾರದಲ್ಲಿದ್ದಾಗ ಅದನ್ನು ದುರುಪಯೋಗಪಡಿಸಿಕೊಂಡು ನಿರ್ಣಯ ಕೈಗೊಂಡಿದ್ದರೆ ಅದು ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಅಡಿ ತನಿಖೆಗೆ ಸೂಕ್ತವಾಗಿದೆ. ಆದರೆ ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ ರಾಜ್ಯಪಾಲರು ವಿಚಾರಣೆಗೆ ಪೂರ್ವಾನುಮತಿ ನೀಡಿದ್ದಾರೆ ಎಂದು ಆಕ್ಷೇಪಿಸುವ ತಯಾರಿಗಳು ನಡೆದಿವೆ.
ಮುಖ್ಯಮಂತ್ರಿಯವರ ವಿರುದ್ಧ 17ಎ ಅಡಿ ಅನುಮತಿ ಕೋರಲುೆೆ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರಿಗೆ ಪೂರ್ವಾನುಮತಿ ನೀಡಲು ಅವಕಾಶವಿಲ್ಲ. ಭಾರತೀಯ ನ್ಯಾಯ ಸಂಹಿತೆ ಕಲಂ 218 ರಡಿ ಅನುಮತಿ ನೀಡಿರುವುದು ಕೂಡ ಕಾನೂನು ಬಾಹಿರ ಎಂದು ವಾದಿಸಲಾಗುತ್ತದೆ.
ಈ ಹಿಂದೆ ನಡೆದ ವಿಚಾರಣೆಯಲ್ಲಿ ರಾಜ್ಯಪಾಲರ ಪೂರ್ವಾನುಮತಿ ಆಧರಿಸಿ ಯಾವುದೇ ಬಲವಂತದ ಕ್ರಮಗಳನ್ನು ಅನುಸರಿಸುವಂತಿಲ್ಲ ಎಂಬ ನಿರ್ದೇಶನಗನ್ನು ಹೈ ಕೋರ್ಟ್ ನೀಡಿತ್ತು ಹಾಗೂ ಕೆಳಹಂತದ ನ್ಯಾಯಾಲಯದಲ್ಲಿ ಆ.21 ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಲು ಸೂಚನೆ ನೀಡಿತ್ತು.
ಇಂದಿನ ವಿಚಾರಣೆಯಲ್ಲಿ ಈ ಮೊದಲು ನೀಡಿದ್ದ ನಿರ್ದೇಶನಗಳೇ ಮುಂದುವರೆಯಲಿದೆಯೇ? ಅಥವಾ ಹೊಸದಾದ ಆದೇಶಗಳು ಜಾರಿಯಾಗಲಿವೆಯೇ? ಎಂಬ ಕುತೂಹಲ ಕೆರಳಿದೆ.
ಒಂದು ವೇಳೆ ನ್ಯಾಯಾಲಯ ರಾಜ್ಯಪಾಲರ ಪೂರ್ವಾನುಮತಿಯ ಕ್ರಮವನ್ನು ಎತ್ತಿಹಿಡಿದರೆ ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆಯಾಗಲಿದೆ. ಅಂತಹ ಸಂದರ್ಭದಲ್ಲಿ ರಾಜಕೀಯವಾಗಿ ಸಾಕಷ್ಟು ಏರುಪೇರುಗಳಾಗುವ ಸಾಧ್ಯತೆಯಿದೆ.