Friday, September 20, 2024
Homeರಾಜ್ಯವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

ಬೆಂಗಳೂರು,ಆ.12- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಫ್ರೀಡಂಪಾರ್ಕ್‌ನಲ್ಲಿಂದು ಸಾವಿರಾರು ಶಿಕ್ಷಕರು ಪ್ರತಿಭಟನೆ ನಡೆಸಿದರು. ಶಿಕ್ಷಕರು ಶಾಲೆಗಳನ್ನು ತೊರೆದು ಪ್ರತಿಭಟನೆಗೆ ಆಗಮಿಸಿದ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳ ತರಗತಿಗಳಲ್ಲಿ ವ್ಯತ್ಯಯವಾಯಿತು.

ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಸೇರಿದಂತೆ ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಸರ್ಕಾರ 2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮೊದಲು ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ ಮೂಲತಃ 1ರಿಂದ 7 ಮತ್ತು 8ನೇ ತರಗತಿಗೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌‍ಟಿ ಎಂದು ಪದನಾಮ ಮಾಡಿ 1ರಿಂದ 5ಕ್ಕೆ ಹಿಂಬಡ್ತಿ ನೀಡಿದೆ.

ಇದರಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನಾನಿರತ ಶಿಕ್ಷಕರು ಆಗ್ರಹಿಸಿದ್ದಾರೆ. 2016ಕ್ಕಿಂತ ಮೊದಲು ನೇಮಕ ಹೊಂದಿದ ಶಿಕ್ಷಕರನ್ನು ಎನ್‌ಸಿಟಿ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲಾ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜ್ಯೇಷ್ಠತೆಯೊಂದಿಗೆ ಪುನರ್‌ ಪದನಾಮಕರಣ ಮಾಡಬೇಕು.

ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016ರ ಮೊದಲು ನೇಮಕಾತಿ ಹೊಂದಿದ ಹಾಗೂ ಬಿಎಡ್‌ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು.

ಈ ಮೊದಲಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೆ ಅಖಂಡ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆಗೆ ಇಳಿದಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆ ಬೇಡಿಕೆಗಳ ಕುರಿತು ನಡೆಸಿದ ಸಭೆ ವಿಫಲವಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಶಿಕ್ಷಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

RELATED ARTICLES

Latest News