Thursday, September 19, 2024
Homeಬೆಂಗಳೂರುಬೈಕ್‌ನಲ್ಲಿ ಹೋಗಿದ್ದ ಟೆಕ್ಕಿ ನಿಗೂಢ ನಾಪತ್ತೆ, ಪತ್ನಿಯಿಂದ ಪೊಲೀಸರಿಗೆ ದೂರು

ಬೈಕ್‌ನಲ್ಲಿ ಹೋಗಿದ್ದ ಟೆಕ್ಕಿ ನಿಗೂಢ ನಾಪತ್ತೆ, ಪತ್ನಿಯಿಂದ ಪೊಲೀಸರಿಗೆ ದೂರು

ಬೆಂಗಳೂರು,ಆ.12- ಬೈಕ್‌ ತೆಗೆದುಕೊಂಡು ಹೊರಗೆ ಹೋದ ಟೆಕ್ಕಿಯೊಬ್ಬರು ಎಂಟು ದಿನ ಕಳೆದರೂ ವಾಪಸ್‌‍ ಬಂದಿಲ್ಲ. ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಟೆಕ್ಕಿಯವರ ಪತ್ನಿ ಕೊಡಿಗೆಹಳ್ಳಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಲಕ್ನೋ ಮೂಲದ ವಿಪಿನ್‌ ಗುಪ್ತ(37) ಎಂಬುವರು ಮಾನ್ಯತಾ ಟೆಕ್‌ ಪಾರ್ಕ್‌ನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್‌ ಇಂಜಿನಿಯರ್‌ ಆಗಿದ್ದು, ನಗರದಲ್ಲಿ ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಿದ್ದಾರೆ. ಕಳೆದ ಆ.4ರಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ವಿಪಿನ್‌ ಗುಪ್ತ ಅವರು ಎಲ್ಲಿಗೆ ಹೋಗುತ್ತಿದ್ದೇನೆಂದು ಪತ್ನಿಗೆ ಹೇಳದೆ ಟಿಶರ್ಟ್‌ನ್ನು ಕೈಯಲ್ಲಿಡಿದುಕೊಂಡು ಕವಾಸಕಿ ಬೈಕ್‌ ತೆಗೆದುಕೊಂಡು ಹೊರಗೆ ಹೋದವರು ಇದುವರೆಗೂ ಮನೆಗೆ ಹಿಂದಿರುಗಿಲ್ಲ.

ಅವರು ಮನೆಯಿಂದ ಹೋದ ಕೆಲವೇ ಗಂಟೆಗಳಲ್ಲಿ ಅವರ ಖಾತೆಯಿಂದ 1.80 ಲಕ್ಷ ಹಣ ಡ್ರಾ ಆಗಿದೆ. ಆದರೆ ಪತಿಯ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ತಕ್ಷಣ ಪತಿಗೆ ಕರೆ ಮಾಡಿದರೂ ಅವರ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಇದರಿಂದ ಪತ್ನಿ ಗಾಬರಿಯಾಗಿ ಪತಿಯನ್ನು ಹುಡುಕಿಕೊಡುವಂತೆ ಕೊಡಿಗೆಹಳ್ಳಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ನಂತರ ನಗರ ಪೊಲೀಸ್‌‍ ಆಯುಕ್ತರಿಗೂ ಎಕ್ಸ್ ನಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ನನ್ನ ಪತಿಯನ್ನು ಹುಡುಕಿಕೊಡಿ ಎಂದು ಅವರ ಪತ್ನಿ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ನನ್ನ ಪತಿಯನ್ನು ಹಣಕ್ಕಾಗಿ ಯಾರಾದರೂ ಅಪಹರಿಸಿರಬಹುದೆಂಬ ಶಂಕೆಯನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ವಿಪನ್‌ ಗುಪ್ತ ಅವರಿಗೆ ಬೈಕ್‌ನಲ್ಲಿ ದೇಶ ಪ್ರವಾಸ ಮಾಡುವ ಹವ್ಯಾಸವಿದೆ. ಹಾಗಾಗಿ ಅವರು ಬೈಕ್‌ನಲ್ಲಿ ಹೋಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ವಿಪಿನ್‌ ಗುಪ್ತ ಅವರು ಮನೆಯಿಂದ ಹೋದ ಸುತ್ತಮುತ್ತಲ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸಿ ಅವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News