Saturday, May 4, 2024
Homeರಾಜ್ಯಪಿಎಸ್‍ಐ ನೇಮಕಾತಿ ಹಗರಣ ವರದಿ ಸರ್ಕಾರಕ್ಕೆ ಸಲ್ಲಿಸಿಕೆ

ಪಿಎಸ್‍ಐ ನೇಮಕಾತಿ ಹಗರಣ ವರದಿ ಸರ್ಕಾರಕ್ಕೆ ಸಲ್ಲಿಸಿಕೆ

ಬೆಂಗಳೂರು,ಜ.22- ಹಿಂದಿನ ಸರ್ಕಾರದಲ್ಲಿ ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ರಚಿಸಲಾಗಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ಏಕಸದಸ್ಯ ನ್ಯಾಯಾಂಗ ಆಯೋಗ ಇಂದು ರಾಜ್ಯಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದ್ದು, ಅದರಲ್ಲಿ ಹಗರಣದಲ್ಲಿ ಭಾಗಿಯಾದ ಮತ್ತಷ್ಟು ಅಧಿಕಾರಿಗಳು ಹಾಗೂ ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಆಗ ವಿರೋಧಪಕ್ಷವಾಗಿದ್ದ ಕಾಂಗ್ರೆಸ್ ಹಗರಣದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿತ್ತು. ವಿಧಾನಸಭೆ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಪಿಎಸ್‍ಐ ನೇಮಕಾತಿಯ ತನಿಖೆಗೆ ಕಳೆದ ಜುಲೈ 21 ರಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಸಮಿತಿಯನ್ನು ರಚಿಸಿತ್ತು. ಆರಂಭದಲ್ಲಿ 3 ತಿಂಗಳ ಒಳಗಾಗಿ ವರದಿ ನೀಡಬೇಕು ಎಂಬ ಸೂಚನೆ ಇತ್ತಾದರೂ ಅದನ್ನು ಹಂತಹಂತವಾಗಿ ವಿಸ್ತರಣೆ ಮಾಡಲಾಗಿತ್ತು.

ಅಂತಿಮವಾಗಿ ಇಂದು ಸಮಿತಿ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿ ಸಲ್ಲಿಸಿದೆ. ವರದಿಯಲ್ಲಿ ಪಿಎಸ್‍ಐ ನೇಮಕಾತಿಯಲ್ಲಿ ಹಗರಣ ನಡೆಯಲು ಕಾರಣಗಳೇನು? ಹಾಗೂ ಯಾವ ರೀತಿ ಪರೀಕ್ಷಾ ಅಕ್ರಮಗಳನ್ನು ನಡೆಸಲಾಗಿದೆ ಎಂಬ ಕುರಿತು ಸವಿಸ್ತಾರವಾದ ವರದಿ ನೀಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮಹತ್ವದ ಶಿಫಾರಸ್ಸುಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮತ್ತಷ್ಟು ಮಂದಿಗೆ ಸಂಕಷ್ಟ :
ಈವರೆಗೂ ಪಿಎಸ್‍ಐ ಹಗರಣದ ತನಿಖೆ ನಡೆಸಿದ ರಾಜ್ಯ ಸಿಐಡಿ ಪೊಲೀಸರು ಆಗಿನ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‍ಪಾಲ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಕಾರಿಗಳು, ಆಯ್ಕೆ ಪಟ್ಟಿಯಲ್ಲಿದ್ದ ಆಕ್ಷಾಂಕ್ಷಿಗಳು, ಅಕ್ರಮಕ್ಕೆ ಸಹಕಾರ ನೀಡಿದ ಪೋಷಕರು ಸೇರಿದಂತೆ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು.

ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೂ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆದರೆ ಸಿಐಡಿ ತನಿಖೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಒತ್ತಡಕ್ಕೆ ಮಣಿದು ಕೆಲವರನ್ನು ಉದ್ದೇಶಪೂರಕವಾಗಿಯೇ ಕೈಬಿಡಲಾಗಿದೆ. ಪ್ರಭಾವಿಗಳನ್ನು ರಕ್ಷಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹಗರಣದಲ್ಲಿ ನಡೆದಿರುವ ಆರ್ಥಿಕ ವಹಿವಾಟಿನ ಮೂಲ ಹಾಗೂ ಅದು ತಲುಪಿರಬಹುದಾದ ಜಾಗಗಳ ಬಗ್ಗೆಯೂ ವಿವರಣೆಗಳಿಲ್ಲ ಎಂಬ ಆಕ್ಷೇಪಗಳಿದ್ದವು.

ಹಗರಣದಲ್ಲಿ ಕೆಲವು ಅಕಾರಿಗಳನ್ನಷ್ಟೇ ಉಲ್ಲೇಖಿಸಲಾಗಿದೆ. ಪ್ರಭಾವಿಗಳ ಮಾಹಿತಿ ಕೈಬಿಟ್ಟು ಹೋಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಆಯೋಗದ ವಿಚಾರಣೆ ಗಮನ ಸೆಳೆದಿದೆ.
ವೀರಪ್ಪ ಅವರ ಸಮಿತಿ ಹಗರಣದಲ್ಲಿ ಭಾಗಿಯಾದ ಮತ್ತಷ್ಟು ಅಧಿಕಾರಿಗಳ ಹೆಸರನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಹೇಳಲಾಗಿದೆ. ಪ್ರಭಾವಿಗಳ ಪಾತ್ರ ಹಾಗೂ ಹೊಣೆಗಾರಿಕೆಯ ಬಗ್ಗೆಯೂ ನಮೂದಿಸುವುದಾಗಿಯೂ ಮೂಲಗಳು ತಿಳಿಸಿವೆ.

ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಜಂಟಿ ಅಧಿವೇಶನದಲ್ಲೇ ವಿಧಾನಮಂಡಲದ ಉಭಯ ಸದನಗಳಲ್ಲೂ ಮಂಡನೆ ಮಾಡುವ ಸಾಧ್ಯತೆಯಿದೆ. ವರದಿ ಮಂಡನೆಯಾಗಿ ಸದನದ ಆಸ್ತಿಯಾಗಿದ್ದೇ ಆದರೆ ಅದು ಮತ್ತಷ್ಟು ಜನರಿಗೆ ಉರುಳಾಗಲಿದೆ ಎಂಬ ವಿಶ್ಲೇಷಣೆ ಇದೆ.

ಕಾಶ್ಮೀರಿ ಹಿಂದೂಗಳ ಪ್ರತಿನಿಧಿಯಾಗಿ ಅಯೋಧ್ಯೆಗೆ ಬಂದಿದ್ದೇನೆ ; ಅನುಪಮ್ ಖೇರ್

ಹಿನ್ನೆಲೆ :
2021 ರ ಅಕ್ಟೋಬರ್‍ನಲ್ಲಿ 545 ಪಿಎಸ್‍ಐಗಳ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆಯಲ್ಲಿ 54 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪರೀಕ್ಷಾ ಫಲಿತಾಂಶ 2022 ರ ಜನವರಿ ತಿಂಗಳಿನಲ್ಲಿ ಪ್ರಕಟಗೊಂಡಿತ್ತು.
ಆದರೆ ಅದರ ನಂತರ ಒಂದೊಂದೇ ಹಗರಣಗಳು ಹೊರಲಾರಂಭಿಸಿದವು. ಆರಂಭದಲ್ಲಿ ನೇಮಕಾತಿಯಲ್ಲಿ ಯಾವುದೇ ಹಗರಣಗಳಾಗಿಲ್ಲ ಎಂದು ಆಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಸಮರ್ಥಿಸಿಕೊಂಡಿದ್ದರು.

ಆದರೆ ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರುಗಳೇ ಪತ್ರಗಳನ್ನು ಬರೆದು ಮಾಹಿತಿಗಳನ್ನು ಬಹಿರಂಗಪಡಿಸಿದ ಬಳಿಕ ಮತ್ತು ವಿರೋಧಪಕ್ಷಗಳ ಒತ್ತಡ ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ಸಿಐಡಿ ತನಿಖೆಗೆ ಒಪ್ಪಿಸಲಾಯಿತು. ಸಿಐಡಿ ತನಿಖೆ ಆರಂಭಗೊಳ್ಳುತ್ತಿದ್ದಂತೆ ಮಹತ್ವದ ಮಾಹಿತಿಗಳು ಹೊರಬರಲಾರಂಭಿಸಿದವು.

ಎಡಿಜಿಪಿ ಅಧಿಕಾರಿಯೇ ಬಂಧನಕ್ಕೊಳಗಾಗಿ ಸೆರೆವಾಸ ಅನುಭವಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದು ಪ್ರಮುಖ ವಿಚಾರವಾಗಿ ಚರ್ಚೆಯಾಗಿತ್ತು. ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದು ಸ್ಮರಣೀಯ.

RELATED ARTICLES

Latest News