Sunday, May 12, 2024
Homeರಾಷ್ಟ್ರೀಯನನಸಾಯ್ತು ಶತಕೋಟಿ ಭಾರತೀಯರ 500 ವರ್ಷಗಳ ಕನಸು

ನನಸಾಯ್ತು ಶತಕೋಟಿ ಭಾರತೀಯರ 500 ವರ್ಷಗಳ ಕನಸು

ಅಯೋಧ್ಯೆ(ಉ.ಪ್ರ)- ಅದೊಂದೇ ಒಂದು ಐತಿಹಾಸಿಕ ಕ್ಷಣಕ್ಕೆ ಸುಮಾರು 500 ವರ್ಷಗಳ ಕಾಲ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಶತಕೋಟಿ ಭಾರತೀಯರ ಕನಸು ಸರಿಯಾಗಿ ಮಧ್ಯಾಹ್ನ 12.29ರಿಂದ 12.30ಕ್ಕೆ ಶುಭ ಮುಹೂರ್ತದಲ್ಲಿ ಅಯೋಧ್ಯೆಯ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಕೊನೆಗೂ ನನಸಾಯಿತು. ಇದರೊಂದಿಗೆ ಸುಮಾರು 70 ವರ್ಷಗಳ ಟೆಂಟ್‍ವಾಸದಿಂದ ಭವ್ಯ ಮಂದಿರಕ್ಕೆ ರಾಮನ ಪುನರಾಗಮನವಾಗುತ್ತಿದ್ದಂತೆ ಇಡೀ ಭಾರತೀಯರ ಸಂತಸಕ್ಕೆ ಪಾರವೇ ಇರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಧರ್ಮದ ಧಾರ್ಮಿಕ ವಿವಿಧಾನಗಳನ್ನು ನೇರವೇರಿಸಿದರೆ, ಕಾಶಿಯ ಹೆಸರಾಂತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಹಾಗೂ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಸುಮಾರು 121 ವೈದಿಕ ಆಚಾರ್ಯರಿಂದ ಧಾರ್ಮಿಕ ಕ್ರಿಯೆ ನೆರವೇರಿದರೆ, 150ಕ್ಕೂ ಹೆಚ್ಚು ಸಂಪ್ರದಾಯಗಳು, 50ಕ್ಕೂ ಹೆಚ್ಚು ಬುಡಕಟ್ಟು, ಕರಾವಳಿ, ದ್ವೀಪ, ಬುಡಕಟ್ಟು ಸಂಪ್ರದಾಯಗಳ ಸಂತರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‍ಎಸ್‍ಎಸ್ ಸರಸಂಚಾಲಕ ಮೋಹನ್ ಭಾಗವತ್ ಹಾಗೂ ಸಂತರು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು.

ಹಿಂದೂಗಳ ಪಾಲಿನ ಮರ್ಯಾದಾ ಪುರುಷೋತ್ತಮನೆಂದು ಕೊಂಡಾಡಲ್ಪಡುವ, ನಾರಾಯಣನ ಅವತಾರಗಳಲ್ಲಿ ಒಂದಾಗಿರುವ ಶ್ರೀರಾಮಚಂದ್ರನ ಜನ್ಮಸ್ಥಾನವಾಗಿರುವ ಸರಯೂ ನದಿ ತೀರದ ಅಯೋಧ್ಯೆಯ ಭವ್ಯಮಂದಿರದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಅದಕ್ಕೂ ಮೊದಲು ಒಂದು ಗಂಟೆ ಕಾಲ ಯೋಗ, ಹೋಮ, ಹವನ ನಡೆದವು. ಪೂಜಾ ವಿವಿಧಾನಗಳು ಮುಗಿಯುತ್ತಿದ್ದಂತೆ ಈ ವೇಳೆ ಭಾರತ ಮಾತ್ರವಲ್ಲದೆ, ವಿಶ್ವದೆಲ್ಲೆಡೆ ಜೈ ಶ್ರೀರಾಮ್ ಘೋಷಣೆಗಳು ಮಾಧರ್ Àನಿಸಿದವು. ಈ ಅಪರೂಪದ ಕ್ಷಣಕ್ಕೆ 60 ದೇಶಗಳಿಂದ 500ಕ್ಕೂ ಹೆಚ್ಚು ವಿದೇಶಿ ಅತಿಥಿಗಳು ಸೇರಿದಂತೆ 7,000 ಗಣ್ಯರು ಸಾಕ್ಷಿಯಾದರು.

ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್ ಅವರು ತಯಾರಿಸಿದ 51 ಇಂಚಿನ ನೂತನ ರಾಮಲಲ್ಲಾ ದೇವಸ್ಥಾನದ ಗರ್ಭಗುಡಿಯಲ್ಲಿ ವಿರಾಜಮಾನನಾಗಿ ಎಲ್ಲರನ್ನೂ ಆಕರ್ಷಿಸುತ್ತಿದ್ದಾನೆ. ಅಯೋಧ್ಯೆಯ ಗರ್ಭಗುಡಿ ಪ್ರವೇಶಿಸಿರುವ ರಾಮಲಲ್ಲಾ ಮೂರ್ತಿಗೆ ಮೊದಲ ಬಾರಿಗೆ ಸುಮಾರು 114 ತೀರ್ಥಕ್ಷೇತ್ರಗಳಿಂದ ತಂದ ನೀರಿನಲ್ಲಿ ಮಹಾಮಜ್ಜನ ಮಾಡಿಸಲಾಯಿತು. ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಎರಡು ಗಂಟೆಗಳ ಕಾಲ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 50 ಸಂಗೀತ ವಾದ್ಯಗಳಿಂದ ಮಂಗಳ ವಾದ್ಯ ಮೊಳಗಿದವು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರತಿನಿಯಾಗಿ ವೀಣೆ, ಉತ್ತರ ಪ್ರದೇಶದ ಪಖ್ವಾಜ್, ಕೊಳಲು, ಧೋಲಕ್, ಆಂಧ್ರ ಪ್ರದೇಶದ ಘಟಂ, ಮಹಾರಾಷ್ಟ್ರದ ಸುಂದರಿ, ಪಂಜಾಬ್‍ನ ಅಲ್ಗೋಜಾ, ಒಡಿಶಾದ ಮರ್ದಲ್, ಮಧ್ಯಪ್ರದೇಶದ ಸಂತೂರ್, ಗುಜರಾತ್ ಸಂತರ್, ಬಿಹಾರದ ಪಖವಾಜ್, ಮಣಿಪುರದ ಪುಂಗ್, ಅಸ್ಸಾಂನ ನಾಗಡಾ ಮತ್ತು ಕಾಳಿ, ಛತ್ತೀಸ್‍ಗಢದ ತುಂಬೂರಾ, ದೆಹಲಿಯ ಶೆಹನಾಯಿ, ರಾಜಸ್ಥಾನದ ರಾವಣಹತ, ಪಶ್ಚಿಮ ಬಂಗಾಳದ ಶ್ರೀಖೋಲ್ ಮತ್ತು ಸರೋದ್, ಜಾರ್ಖಂಡ್‍ನ ಸಿತಾರ್, ಉತ್ತರಾಖಂಡದ ಹುಡ್ಕಾ, ತಮಿಳುನಾಡಿನ ನಾಗಸ್ವರಂ, ತವಿಲ್, ಮೃದಂಗ ಸೇರಿ ಭಾರತೀಯ ಸಂಗೀತ ಸಂಪ್ರದಾಯದಲ್ಲಿ ಬಳಸುವ ಎಲ್ಲಾ ವಾದ್ಯಗಳನ್ನು ಶ್ರೀ ರಾಮ ಮಂದಿರದ ಪ್ರಾಂಗಣದಲ್ಲಿ ನುಡಿಸಲಾಯಿತು.

ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಅಯೋಧ್ಯೆಯ ಖ್ಯಾತ ಕವಿ ಯತೀಂದ್ರ ಮಿಶ್ರಾ ಅವರಿಂದ ಈ ಭವ್ಯ ಸಂಗೀತ ಮೇಳವನ್ನು ಆಯೋಜಿಸಲಾಗಿತ್ತು. ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗಿರುವ ರಾಮಮಂದಿರವು, 360 ಅಡಿ ಉದ್ದ, 235 ಅಡಿ ಅಗಲವಿದ್ದು, ದೇವಸ್ಥಾನ ಪೂರ್ಣಗೊಂಡ ನಂತರ, ದೇವಸ್ಥಾನದ ತಳದಿಂದ ಅದರ ಗರ್ಭಗುಡಿಯಲ್ಲಿನ ಗೋಪುರದ ತುದಿಯವರೆಗೆ 161 ಅಡಿ ಎತ್ತರವಿರಲಿದೆ. ಇದು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಪ್ರತಿ ಅಂತಸ್ತು 20 ಅಡಿ ಎತ್ತರವಿರಲಿದೆ.

ಈಗ ಪ್ರತಿಷ್ಠಾಪನೆ ಅಂಗವಾಗಿ ಮೊದಲ ಅಂತಸ್ತು (ನೆಲ ಅಂತಸ್ತು) ಪೂರ್ಣವಾಗಿದೆ. ನೆಲ ಅಂತಸ್ತಿನಲ್ಲಿ 160 ಕಂಬಗಳಿದ್ದು (ಪಿಲ್ಲರ್ ಗಳು), ಮೊದಲ ಅಂತಸ್ತಿನಲ್ಲಿ 132 ಕಂಬಗಳು, ಮೂರನೇ ಅಂತಸ್ತಿನಲ್ಲಿ 74 ಕಂಬಗಳು ಇರಲಿವೆ. ದೇವಾಲಯದ ಪ್ರವೇಶವು ಪೂರ್ವ ದಿಕ್ಕಿನಿಂದ ಮತ್ತು ನಿರ್ಗಮನವು ದಕ್ಷಿಣ ದಿಕ್ಕಿನಿಂದ ಇರುತ್ತದೆ. ದೇವಾಲಯವು ಮೂರು ಅಂತಸ್ತಿನದ್ದಾಗಲಿದೆ. ಮುಖ್ಯ ದೇವಾಲಯವನ್ನು ತಲುಪಲು, ಭಕ್ತರು ಪೂರ್ವ ಭಾಗದಿಂದ 32 ಮೆಟ್ಟಿಲುಗಳನ್ನು ಏರುತ್ತಾರೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವಿದ್ದು, 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ-ಪ್ರತಿಷ್ಠಾಪನಾ ಸಮಾರಂಭದ ವೈದಿಕ ಆಚರಣೆಗಳು ಜನವರಿ 16ರಂದು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಪ್ರಾರಂಭವಾಗಿತ್ತು. ರಾಮ ಜನ್ಮಭೂಮಿ-ಬಾಬರಿ ಮಸೀದಿ ಶೀರ್ಷಿಕೆ ಮೊಕದ್ದಮೆಯಲ್ಲಿ 2019ರಲ್ಲಿ ಐತಿಹಾಸಿಕ ಸುಪ್ರೀಂಕೋರ್ಟ್ ತೀರ್ಪಿನಿಂದ ಸಾಧ್ಯವಾದ ದೇವಾಲಯದ ನಿರ್ಮಾಣದ ಮೊದಲ ಹಂತದ ನಂತರ ಶಂಕುಸ್ಥಾಪನೆ ಸಮಾರಂಭ ನಡೆಸಲಾಗಿತ್ತು.

ಕೇಸರಿ ಬಣ್ಣದೊಂದಿಗೆ ಝಗಮಗಿಸುತ್ತಿದೆ ಆಯೋಧ್ಯೆ

ರಾಮನ ಜನ್ಮಸ್ಥಳವನ್ನು ಗುರುತಿಸುವ ದೇವಾಲಯದ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ದಾವೆದಾರರು ವಾದಿಸಿದ್ದರು. 1992ರಲ್ಲಿ, 16ನೇ ಶತಮಾನದ ಮಸೀದಿಯನ್ನು ಕರ ಸೇವಕರು ಕೆಡವಿ ಹಾಕಿದ್ದರು. ಇದೀಗ ಸುಪ್ರೀಂ ಕೋರ್ಟ್ ನ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಕೊನೆಗೂ ರಾಮಮಂದಿರ ತಲೆ ಎತ್ತಿ ನಿಂತಿದೆ.

ಅಯೋಧ್ಯೆ-ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ನಡೆಯುತ್ತಿರುವ ಈ ಭವ್ಯ ಸಮಾರಂಭಕ್ಕೆ 7,000 ಕ್ಕೂ ಹೆಚ್ಚು ಗಣ್ಯರು ಸಾಕ್ಷೀಯಾದರು. ಈ ಆಯ್ದ ಪಟ್ಟಿಯಲ್ಲಿ 506 ಎ-ಲಿಸ್ಟರ್ ಗಣ್ಯರೂ ಕೂಡ ಇದ್ದು, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮತ್ತು ಕ್ರೀಡಾ ಐಕಾನ್ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಪ್ರಮುಖ ವ್ಯಕ್ತಿಗಳಲ್ಲಿ ಸೇರಿದ್ದರು. ಹೀಗಾಗಿ ಇಡೀ ಕಾರ್ಯಕ್ರಮಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು.ಕ್ರಿಕೆಟ್ ಜಗತ್ತು, ಚಲನಚಿತ್ರ ಜಗತ್ತು, ಸಂತ ಸಮಾಜ, ರಾಜಕೀಯ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮತ್ತು ಇತರ ಕ್ಷೇತ್ರಗಳ ವಿಶೇಷ ಅತಿಥಿಗಳನ್ನು ಈ ಭವ್ಯ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು.

ಸಮಾಜದ ಉನ್ನತ ವ್ಯಕ್ತಿಗಳಾದ ನ್ಯಾಯಮೂರ್ತಿಗಳು, ವಿಜ್ಞಾನಿಗಳು, ದೈತ್ಯ ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾ ತಾರೆಯರು ಸೇರಿದಂತೆ ಸುಮಾರು 8000 ಗಣ್ಯರನ್ನು ಆಹ್ವಾನಿಸಲಾಗಿತ್ತು. ಇವರಲ್ಲಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮುಕೇಶ್ ಅಂಬಾನಿ, ಇನೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ – ಸುಧಾಮೂರ್ತಿ ದಂಪತಿ, ನಂದನ್ ನಿಲೇಕಣಿ, ಟಿ.ವಿ. ಮೋಹನ ದಾಸ್ ಪೈ, ರತನ್ ಟಾಟಾ, ಸಿನಿಮಾ ಸೂಪರ್ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್ ದಂಪತಿ, ರಜನೀಕಾಂತ್, ಮೋಹನ್ ಲಾಲ್, ಕನ್ನಡದ ಯಶ್, ತೆಲುಗಿನ ಪ್ರಭಾಸ್; ಕ್ರೀಡಾತಾರೆಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಚೆಸ್ ತಾರೆಯಾದ ವಿಶ್ವನಾಥನ್ ಆನಂದ್, ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

RELATED ARTICLES

Latest News