Tuesday, February 27, 2024
Homeರಾಷ್ಟ್ರೀಯರಾಮಲಲ್ಲಾ ಕಾರ್ಯಕ್ರಮ ನೇರ ಪ್ರಸಾರಕ್ಕೆ ತಮಿಳುನಾಡಿನಲ್ಲಿ ಕಿಡಿಗೇಡಿಗಳಿಂದ ಅಡ್ಡಿ

ರಾಮಲಲ್ಲಾ ಕಾರ್ಯಕ್ರಮ ನೇರ ಪ್ರಸಾರಕ್ಕೆ ತಮಿಳುನಾಡಿನಲ್ಲಿ ಕಿಡಿಗೇಡಿಗಳಿಂದ ಅಡ್ಡಿ

ಚೆನ್ನೈ,ಜ.22- ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ತಮಿಳುನಾಡಿನಲ್ಲಿ ಅಡ್ಡಿಪಡಿಸಿರುವುದರ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿಬಂದಿವೆ. ಅಯೋಧ್ಯೆಯಲ್ಲಿ ಪ್ರಧಾನಿಯವರು ಪ್ರಾಣ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮದ ನೇರಪ್ರಸಾರವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರು ಕಾಮಾಕ್ಷಿ ಅಮ್ಮನ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಬೃಹತ್ ಎಲ್‍ಇಡಿಯಲ್ಲಿ ವೀಕ್ಷಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದಾಗಿ ಗೊಂದಲಗಳಾಗಿವೆ ಎಂದು ಹೇಳಲಾಗಿದೆ.

ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‍ರವರು ತಮಿಳುನಾಡಿನಲ್ಲಿ ವಿವಿಧ ಕಡೆ ಆಯೋಜಿಸಲಾಗಿದ್ದ ನೇರಪ್ರಸಾರಕ್ಕೆ ತಡೆಯೊಡ್ಡಿರುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನಾಗರ ಕೋಯಿಲ್‍ನಲ್ಲಿರುವ ಥೋವಲೈ ಮುರುಗನ್ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿನ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ಎಲ್‍ಇಡಿ ಪರದೆಗಳನ್ನು ಅಳವಡಿಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ನೇರಪ್ರಸಾರದಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನ

ಇನ್ನು ಕಾಂಚಿಪುರಂ ಜಿಲ್ಲೆಯಲ್ಲಿ 466 ಎಲ್‍ಇಡಿ ಪರದೆಯನ್ನು ಅಳವಡಿಸುವ ಸವ್ಯವಸ್ಥೆಯಾಗಿದ್ದು ಪೊಲೀಸರು 400 ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಲ್‍ಇಡಿ ಪರದೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಪೊಲೀಸರನ್ನು ನಿಯೋಜಿಸಿ ನೇರಪ್ರಸಾರವನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಡಿಎಂಕೆ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಎಲ್‍ಇಡಿ ಪೂರೈಕೆದಾರರು ಭಯದಿಂದ ಹೆದರಿ ಓಡಿಹೋಗುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಮತ್ತೊಂದೆಡೆ ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಮಿಳುನಾಡಿನ ಖಾಸಗಿ ಆವರಣದಲ್ಲಿ ಪ್ರಾಣ ಪ್ರತಿಷ್ಠಾಪನಾ ನೇರಪ್ರಸಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಮೌಖಿಕ ಆದೇಶ ನೀಡಿ ತಮಿಳುನಾಡು ಸೇರಿದಂತೆ ಯಾವುದೇ ರಾಜ್ಯಗಳು ಜನರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಸೂಚಿಸಿದೆ. ಆದರೆ ತಮಿಳುನಾಡಿನ ದೇವಸ್ಥಾನದಲ್ಲಿ ನೇರಪ್ರಸಾರ, ಬಜನೆ, ವಿಶೇಷ ಪೂಜೆ, ಅನ್ನದಾನಕ್ಕೆ ನಿರ್ಬಂಧಗಳಿಲ್ಲ ಎಂದು ವಿವರಿಸಿದರು. ಅದರ ಹೊರತಾಗಿಯೂ ತಮಿಳುನಾಡಿನ ಬಹುತೇಕ ಕಡೆ ಪ್ರಸಾರಕ್ಕೆ ನಿರಾಕರಿಸಲಾಗಿತ್ತು ಎಂಬ ದೂರುಗಳಿವೆ.

RELATED ARTICLES

Latest News