Tuesday, December 3, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಜೈಪುರದಿಂದ ಬಂದ 24 ಅಡಿಯ ಬೃಹತ್ ಶೀತಲನಾಥ್ ಭಗವಾನ್‌ಗೆ ಪೂಜೆ

ಜೈಪುರದಿಂದ ಬಂದ 24 ಅಡಿಯ ಬೃಹತ್ ಶೀತಲನಾಥ್ ಭಗವಾನ್‌ಗೆ ಪೂಜೆ

Puja to Lord Sheetalnath, a 24 feet giant from Jaipur

ಚಿಕ್ಕಮಗಳೂರು,ಅ.27- ಹೊಯ್ಸಳರ ಶಿಲ್ಪ ಕಲೆಯ ತವರು ಹಾಸನ ಜಿಲ್ಲೆಯ ಹಳೆಬೀಡು ಸಮೀಪದ ಜೈನಗುತ್ತಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 24 ಅಡಿ ಎತ್ತರದ 64 ಟನ್ ತೂಕದ ಬೃಹತ್ ತೀರ್ಥಂಕರ ಶೀತಲನಾಥ ಭಗವಾನ್ ಪ್ರತಿಮೆ ರಾಜಸ್ಥಾನದ ಜೈಪುರದಿಂದ ನಗರ ಹೊರವಲಯಕ್ಕೆ ಆಗಮಿಸಿದ್ದ ವೇಳೆ ನಗರದ ಜೈನ ಸಮಾಜದ ಮುಖಂಡರು ಭಕ್ತಿಯಿಂದ ಬರಮಾಡಿಕೊಂಡರು.

2.5 ಕೋಟಿ ರೂ.ಗಳ ವೆಚ್ಚದಲ್ಲಿ ಜೈಪುರದಲ್ಲಿ ರಾಜಸ್ಥಾನ ಗ್ರನೈಟ್ ಏಕ ಶಿಲೆಯಲ್ಲಿ ಕೆತ್ತನೆಗೊಂಡಿರುವ ತೀರ್ಥಂಕರ ಶೀತಲನಾಥ ಭಗವಾನ್ ಪ್ರತಿಮೆ ಎರಡು ದೊಡ್ಡ ಟ್ರಕ್‌ಗಳು ವಾರದ ಹಿಂದೆ ಪ್ರಯಾಣ ಆರಂಭಿಸಿ, ಕಡೂರು ಮಾರ್ಗವಾಗಿ ಹೆದ್ದಾರಿಯಲ್ಲಿ ಸಾಗಿ ಬಂದ ಪ್ರತಿಮೆಗೆ, ಹಿರೇಮಗಳೂರಿನಲ್ಲಿ ಕಾಯ್ದಿದ್ದ ಜೈನ ಸಮಾಜದ ಮುಖಂಡರು ಶ್ರದ್ಧಾ ಭಕ್ತಿಯಿಂದ ಪೂಜೆಯೊಂದಿಗೆ ಗೌರವ ಸಮರ್ಪಿಸಿ ಬೀಳ್ಕೊಟ್ಟರು.

ಜೈನ ಸಮಾಜದ ಮಾತೆಯರು ಪೂರ್ಣ ಕುಂಭ ಹೊತ್ತು ಮಂತ್ರ ಪಠಿಸಿ ತೀರ್ಥಂಕರ ಶೀತಲನಾಥ ಭಗವಾನ್ ಮೂರ್ತಿಗೆ ಜೈಕಾರ ಹಾಕಿದರು. ಪ್ರತಿಮೆಗೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ ಇಡುಗಾಯಿ ಸೇವೆ ಸಲ್ಲಿಸಿದರು. ಜೊತೆಗೆ ಅಲ್ಲಿ ಸಮಾವೇಶಗೊಂಡಿದ್ದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ತಿಂಗಳ 29ರಿಂದ ನವಂಬರ್ 4ರವರೆಗೆ ಪಂಚ ಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಹಳೆಬೀಡಿನ ಜೈನ ಗುತ್ತಿಯಲ್ಲಿ ನಡೆಯಲಿದ್ದು, ರಾಜ್ಯವಲ್ಲದೆ ದೇಶದ ನಾನಾ ಕಡೆಗಳಿಂದ ಜೈನ್ ಸಮುದಾಯದ ಮುನಿಗಳು, ಮುಖಂಡರು ಆಗಮಿಸಲಿದ್ದಾರೆ ಎಂದು ಜೈನ ಸಮಾಜದ ಅಡುಗೂರಿನ ನಾಗಚಂದ್ರ ಜೈನ್ ಸುದ್ದಿಗಾರರಿಗೆ ತಿಳಿಸಿದರು.

ಚಿಕ್ಕಮಗಳೂರು ಜೈನ್ ಸಮಾಜದ ಅಧ್ಯಕ್ಷೆ ಚಾರಿತ್ರ ಜಿನೇಂದ್ರ ಜೈನ್, ಜೈನ್ ಸಮಾಜದ ಮುಖಂಡರಾದ ಜಿನೇಂದ್ರ ಬಾಬು ಜೈನ್, ಮೂಗ್ತಿಹಳ್ಳಿಯ ಪದ್ಮಾನಂದ ಜೈನ್, ಅಡಗೂರು ಜೈನ್ ಸಮಾಜದ ಕೀರ್ತಿ ಜೈನ್, ಬ್ರಹ್ಮಪಾಲ್ ಜೈನ್ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. ತೀರ್ಥಂಕರ ಶೀತಲನಾಥ ಭಗವಾನ್ ಪ್ರತಿಮೆ ಹೊತ್ತ ಟ್ರಕ್ ರಸ್ತೆಯಲ್ಲಿ ನಿಧಾನವಾಗಿ ಸಾಗುವಾಗ ಅನೇಕ ಜನರು ಕುತೂಹಲದಿಂದ ಆಗಮಿಸಿ ಕೈ ಮುಗಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

RELATED ARTICLES

Latest News