ನವದೆಹಲಿ,ಜೂ.10- ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಲೋಕಸಭೆಯ ಸ್ಪೀಕರ್ ಆಯ್ಕೆಯತ್ತ ಚಿತ್ತ ಹರಿಸಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಈ ಬಾರಿ ಲೋಕಸಭೆಯ ಸ್ಪೀಕರ್ ಹುದ್ದೆಯೂ ಆಂಧ್ರಪ್ರದೇಶದ ಬಿಜೆಪಿ ಮುಖ್ಯಸ್ಥೆ ದಿವಂಗತ ಎನ್.ಟಿ.ರಾಮರಾವ್ ಪುತ್ರಿಯೂ ಆಗಿರುವ ರಾಜಮಂಡ್ರಿ ಲೋಕಸಭಾ ಕ್ಷೇತ್ರದ ಸದಸ್ಯೆ ದಗ್ಗುಬಾಟಿ ಪುರಂದರೇಶ್ವರಿ(ಡಿ.ಪುರಂದರೇಶ್ವರಿ) ಲೋಕಸಭೆಯ ಸ್ಪೀಕರ್ ಆಗುವ ಸಾಧ್ಯತೆ ಇದೆ.
ಒಂದು ವೇಳೆ ಇದು ಸಾಧ್ಯವಾದಲ್ಲಿ ಅತ್ಯಂತ ಮಹತ್ವದ ಹುದ್ದೆ ಎನಿಸಿದ ಲೋಕಸಭೆಯ ಸ್ಪೀಕರ್ ಹುದ್ದೆ ಅಲಂಕರಿಸಿದ ಭಾರತದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪುರಂದರೇಶ್ವರಿ ಪಾತ್ರರಾಗಲಿದ್ದಾರೆ. ಈ ಹಿಂದೆ ಲೋಕಸಭೆಯ ಮೊದಲ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಭಾರತದ ಉಪಪ್ರಧಾನಿ ಜಗಜೀವನ್ ರಾವ್ ಪುತ್ರಿಯಾಗಿದ್ದ ಮೀರಾಕುಮಾರ್ , ನಂತರ 2014ರಲ್ಲಿ ಮೋದಿ ನೇತೃತ್ವದ ಮೊದಲ ಸರ್ಕಾರದಲ್ಲಿ ಬಿಜೆಪಿ ಹಿರಿಯ ಸದಸ್ಯೆ ಸುಮಿತ್ರಾ ಮಹಾಜನ್ ಹುದ್ದೆಯನ್ನು ನಿಭಾಯಿಸಿದ ಕೀರ್ತಿ ಸಲ್ಲುತ್ತದೆ.
ಸರ್ಕಾರ ರಚನೆಯಾಗುವ ಮುನ್ನ ಲೋಕಸಭೆಯ ಸ್ಪೀಕರ್ ಹುದ್ದೆಯನ್ನು ತಮಗೆ ನೀಡಬೇಕೆಂಬ ಬೇಡಿಕೆಯನ್ನು ಮಿತ್ರ ಪಕ್ಷವಾದ ಟಿಡಿಪಿ ಮುಂದಿಟಿತ್ತು. ಕೆಲವು ವಿಶೇಷ ಸಂದರ್ಭಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸ್ಪೀಕರ್ ಹುದ್ದೆಯನ್ನು ಯಾವುದೇ ಪಕ್ಷ ಬಿಟ್ಟುಕೊಡಲು ಸುತಾರಾಮ್ ಒಪ್ಪುವುದಿಲ್ಲ. ಇದೀಗ ಬಿಜೆಪಿ ಒಂದೇ ಕಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಚಾರ ಹಾಕಿಕೊಂಡಿದೆ.
ಅಂದರೆ ಒಂದು ಕಡೆ ಡಿ.ಪುರಂದರೇಶ್ವರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಕೂರಿಸಿದರೆ ಮಹಿಳೆಯರ ಪರವಾಗಿ ಇದೆ ಎಂಬ ಸಂದೇಶವನ್ನು ರವಾನಿಸುವುದು ಮತ್ತೊಂದು ಕಡೆ ಟಿಡಿಪಿ ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂಬ ದೂರ ದೃಷ್ಟಿಯೂ ಇದೆ. ಟಿಡಿಪಿ ಮುಖಂಡ ಚಂದ್ರಬಾಬು ಅವರ ಪತ್ನಿಯ ಸಹೋದರಿಯಾಗಿರುವ ಡಿ.ಪುರಂದರೇಶ್ವರಿ ಆಯ್ಕೆಗೆ ಮಿತ್ರ ಪಕ್ಷವಾದ ಟಿಡಿಪಿ, ಜನಸೇನಾ ಸೇರಿದಂತೆ ಯಾವುದೇ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ.
ಭವಿಷ್ಯದ ದೃಷ್ಟಿಯಿಂದ ಟಿಡಿಪಿ ಜೊತೆ ಹೊಂದಿಕೊಂಡು ಹೋಗಲೇಬೇಕಾದ ಅಗತ್ಯವಿರುವುದರಿಂದ ಪುರಂದರೇಶ್ವರಿ ಅವರು ಬಿಜೆಪಿ ಮತ್ತು ನಾಯ್ಡು ನಡುವೆ ಸಮನ್ವಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ನಂಬಿಕೆ ಬಿಜೆಪಿಗಿದೆ.
ಈ ಹಿಂದೆ ಯುಪಿಎ ಸರ್ಕಾರದಲ್ಲಿ ಮಾನವ ಸಂಪನೂಲ,ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ. ಉತ್ತಮ ಶಿಕ್ಷಣ ಹಿನ್ನೆಲಯೂ ಅವರ ಬೆನ್ನಿಗಿರುವುದರಿಂದ ಬಹುತೇಕ ಪುರಂದರೇಶ್ವರಿ ಲೋಕಸಭೆ ಸ್ಪೀಕರ್ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನೆ ಮತ್ತು ಬಿಜೆಪಿ ಮೈತ್ರಿಯಾಗಲು ಇವರು ನಿರ್ವಹಿಸಿದ ಪಾತ್ರ ಪ್ರಮುಖವಾಗಿತ್ತು. ಭಾನುವಾರದವರೆಗೆ ಅವರು ಸಚಿವರಾಗುತ್ತಾರೆ ಎಂಬ ವದ್ದಂತಿಗಳು ಹಬ್ಬಿದ್ದವು.
ಕೊನೆಕ್ಷಣದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳದಿರುವ ಕಾರಣವೇ ಅವರಿಗೆ ಮಹತ್ವದ ದೊಡ್ಡ ಹುದ್ದೆ ಸಿಗಲಿದೆ ಎಂದು ಪ್ರಧಾನಿ ಕಾರ್ಯಾಲಯದಿಂದಲೇ ಮಾಹಿತಿ ಹೋಗಿದೆ ಎಂದು ಹೇಳಲಾಗುತ್ತಿದೆ.