ಬೆಂಗಳೂರು,ಜ.1-ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದವರ ವಿರುದ್ಧ ದಾಖಲಾಗಿದ್ದ ಹಳೆಯ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಕೆದಕಿ ಬಂಧಿಸಿ ಜೈಲಿಗಟ್ಟುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಭಕ್ತರನ್ನು ಬಂಧಿಸುವ ಮೂಲಕ ಟಿಪ್ಪು ಸಂಸ್ಕøತಿ ಹೇರುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ದ್ವೇಷದ ರಾಜಕಾರಣ ಮಾಡುತ್ತಿತ್ತು. ಆಗಲೂ ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿದ್ದವು ಎಂದು ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ರಾಮನ ಮೂರ್ತಿ ಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಜನರು ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಮ ಜನ್ಮಭೂಮಿಗಾಗಿ ಹೋರಾಟಕ್ಕೆ ಹೋಗಿದ್ದ ಕರ ಸೇವಕರನ್ನು ಬಂಧಿಸುವ ಕೆಲಸವಾಗಿದೆ.
ಹುಬ್ಬಳ್ಳಿಯಲ್ಲಿ 25-30 ವರ್ಷದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಹೂಗುಚ್ಛ ಬೇಡ, ಅನಾಥ ಮಕ್ಕಳಿಗೆ ಸಹಾಯ ಮಾಡಿ : ದಯಾನಂದ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಾನು ಕೂಡ ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದೆವು. ನಮ್ಮನ್ನು ಬಂಧಿಸುತ್ತೀರಾ? ಬಂಧಿಸುವ ಧೈರ್ಯವಿದೆಯೇ? ಹಳೆಯ ಪ್ರಕರಣಗಳನ್ನು ಹುಡುಕಿ ಕೆದಕುವ ಕೆಲಸ ಮಾಡಲಾಗುತ್ತಿದೆ. ರಾಮ ರಥಯಾತ್ರೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ.
ಇದೇ ರೀತಿ ಹಳೆಯ ಪ್ರಕರಣಗಳಿಗೆ ರಾಜ್ಯಾದ್ಯಂತ ಮರುಜೀವ ನೀಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ದೂರಿದರು. ಪ್ರಧಾನಿ ನರೇಂದ್ರಮೋದಿ ಅವರು ರಾಮಮಂದಿರ ಉದ್ಘಾಟನೆಯಾಗುವ ಸಂದರ್ಭದಲ್ಲಿ ಮನೆ ಮುಂದೆ ದೀಪ ಬೆಳಗಿ ಎಂದು ಕರೆ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರಾಮ ಭಕ್ತರ ಮೇಲೆ ಕೇಸು ಹಾಕುವ ಮೂಲಕ ಭಯವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದರು.
ಟಿಪ್ಪು ಜಯಂತಿ ಆಚರಿಸುವ ಕಾಂಗ್ರೆಸಿಗರು ಶ್ರೀರಾಮನವಮಿ ಮಾಡಿದ್ದಾರೆಯೇ? ನಾಮ ಧರಿಸುತ್ತಾರೆಯೇ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದರು.
ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರಿಗೆ 11 ಸಾವಿರ ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದಾರೆ. ಆದರೆ ಬರಗಾಲದಿಂದ ತತ್ತರಿಸಿ ಸಂಕಷ್ಟದಲ್ಲಿರುವ ರೈತರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಗೋಪಾಲಯ್ಯ ಉಪಸ್ಥಿತರಿದ್ದರು.