ಬೆಂಗಳೂರು,ಏ.21- ಜಾತಿಗಣತಿಯಲ್ಲಿ ಮೂಲಪ್ರತಿಗಳು ಲಭ್ಯವಿಲ್ಲ ಎಂಬ ಆರೋಪ ನಿರಾಧಾರ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಪ್ಪು ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾತಿಗಣತಿಯ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಅವರು ಹೇಗೆ ಸುಳ್ಳು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.
ಒಂದು ವೇಳೆ ಆರ್.ಅಶೋಕ್‌ರವರಿಗೆ ಅನುಮಾನವಿದ್ದರೆ ಜಯಪ್ರಕಾಶ್ ಹೆಗ್ಡೆಯವರನ್ನೇ ನೇರವಾಗಿ ಕೇಳಬಹುದು. ಅದನ್ನು ಬಿಟ್ಟು ಸುಳ್ಳು ಹೇಳುವುದೇಕೆ?, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಬಾರದಿತ್ತು. ಈ ಸಂಪ್ರದಾಯ ಸರಿಯಲ್ಲ. ಜನಿವಾರ, ಲಿಂಗ ಸೇರಿದಂತೆ ಧಾರ್ಮಿಕವಾಗಿ ಅನೇಕ ಆಚರಣೆಗಳಿರುತ್ತವೆ. ಮಹಿಳೆಯರು ಮಾಂಗಲ್ಯಸರ ಕೂಡ ಹಾಕಿರುತ್ತಾರೆ. ಇದನ್ನೆಲ್ಲಾ ತೆಗೆಸುವುದು ಒಳ್ಳೆಯ ನಿರ್ಧಾರವಲ್ಲ ಎಂದು ಹೇಳಿದರು. ಪರೀಕ್ಷಾ ವೇಳೆ ತಪಾಸಣೆಗಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಳವಡಿಸಲಾಗಿರುತ್ತದೆ.
ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧಾರ್ಮಿಕ ವಿಚಾರಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಶಾಸಕ ಮುನಿರತ್ನ ಆಣೆ, ಪ್ರಮಾಣಕ್ಕೆ ಸವಾಲು ಹಾಕಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅಲ್ಲಿಂದ ನಿರ್ಗಮಿಸಿದರು.