Monday, October 14, 2024
Homeರಾಜ್ಯರಾಜೀನಾಮೆ ನೀಡಿ ನೈತಿಕತೆ ಪ್ರದರ್ಶಿಸಿ : ಸಿಎಂಗೆ ಅಶೋಕ್‌ ಸವಾಲು

ರಾಜೀನಾಮೆ ನೀಡಿ ನೈತಿಕತೆ ಪ್ರದರ್ಶಿಸಿ : ಸಿಎಂಗೆ ಅಶೋಕ್‌ ಸವಾಲು

ಬೆಂಗಳೂರು,ಸೆ.26- ಕಾಂಗ್ರೆಸ್‌‍ ಹೈಕಮಾಂಡ್‌ಗೆ ದಮು , ತಾಕತ್ತು ಇದ್ದರೆ ಮುಡಾ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಯನ್ನು ತಕ್ಷಣವೇ ಪಡೆದು ನೈತಿಕತೆ ಪ್ರದರ್ಶನ ಮಾಡಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಬಹಿರಂಗ ಸವಾಲು ಹಾಕಿದ್ದಾರೆ.

ಮುಡಾ ಪ್ರಕರಣ ಸಂಬಂಧ ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಉಳಿಸಿಕೊಂಡಿದ್ದರೆ ಮೊದಲು ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲಿ. ಇಲ್ಲದಿದ್ದರೆ ಕಾಂಗ್ರೆಸ್‌‍ ಪಕ್ಷ ಭ್ರಷ್ಟಾಚಾರದ ಜೊತೆ ರಾಜೀ ಮಾಡಿಕೊಂಡಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಎಸೆದರು.

ಹಿಂದೆ ನಮ ಪಕ್ಷದ ಹಿರಿಯರಾದ ಯಡಿಯೂರಪ್ಪನವರ ವಿರುದ್ಧ ಎಫ್‌ಐಆರ್‌ ದಾಖಲಾದಾಗ ಇದೇ ಸಿದ್ದರಾಮಯ್ಯ ಏನೇನು ಮಾತನಾಡಿದರು ಎಂಬುದನ್ನು ಒಂದು ಬಾರಿ ಆತಾವಲೋಕನ ಮಾಡಿಕೊಳ್ಳಲಿ. ಅಂದು ರಾಜೀನಾಮೆಗೆ ಒತ್ತಾಯಿಸಿದ್ದ ಇವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಈಗ ಬೇರೆ ಆಯ್ಕೆಗಳೇ ಇಲ್ಲ. ಹೈಕೋರ್ಟ್‌ ಆದೇಶ ಬಂದಿದೆ. ಯಾವ ಸೆಕ್ಷನ್‌ನಡಿ ತನಿಖೆಯಾಗಬೇಕು ಎಂಬುದನ್ನೂ ಹೇಳಿದೆ. ಸೆಕ್ಷನ್‌ 420ರಡಿ ದೂರು ದಾಖಲಿಸಲಾಗಿದೆ. ಎಫ್‌ಐಆರ್‌ ಅಗಿದ್ಯಾ? ರಾಜೀನಾಮೆ ಕೊಡೋಕೆ ಎಂದು ಪ್ರಶ್ನಿಸುತ್ತಿದ್ದರು. ಇವತ್ತು ಎಫ್‌ಐಆರ್‌ ಆಗಲಿದೆ. ಇದಕ್ಕಿಂತ ಇನ್ನೇನು ಬೇಕು? ಎಂದು ಪ್ರಶ್ನಿಸಿದರು. ಹಿಂದೆ ಯಡಿಯೂರಪ್ಪ ಅವರು ಲೋಕಾಯುಕ್ತ ತನಿಖೆ ಆಗುವಾಗ ಯಾವ ಹೇಳಿಕೆ ಕೊಟ್ಟಿದ್ದೀರಿ? ಯಡಿಯೂರಪ್ಪ ಕೇಸ್‌‍ ಬೇರೆ, ನಮ ಕೇಸ್‌‍ ಬೇರೆ ಅಂತೀರಿ. ಈಶ್ವರಪ್ಪ ಕೇಸ್‌‍ ಆದಾಗ ಏನ್‌ ಹೇಳಿದ್ದೀರಿ? ತನಿಖೆ ಆಗಿತ್ತಾ? ಆಗ.. ಈಶ್ವರಪ್ಪ ರಾಜೀನಾಮೆಗೆ ಕುಸ್ತಿ ಮಾಡಿದ್ದೀರಿ. ಈಗ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಹಾಕಿದರು.

ಮೋದಿ ಅವರು ಹೇಳಿದ್ದರೇ ನಿಮಗೆ ಮುಡಾದಲ್ಲಿ ಸೈಟ್‌ ತಗೊಳ್ಳೋಕೆ? ವಾಲೀಕಿ ಹಗರಣದಲ್ಲಿ ಎಸ್‌‍ಟಿಗಳ ಹಣ ದುರುಪಯೋಗ ಆಗಿರುವುದನ್ನು ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿಯಲ್ಲಿ ನಿಮಗೆ ಕಾಸು ಬರುತ್ತಿಲ್ಲ. ರಾಜೀನಾಮೆ ಕೊಡಬೇಕು ಎಂದು ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರೇ ಹೇಳಿದ್ದಾರೆ. ಕೋಳಿವಾಡ ಅವರು ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಟವೆಲ್‌ ಹಾಕಿಕೊಂಡು 7 ಜನ ಕಾಯುತ್ತಿದ್ದಾರೆ. ರಾಹುಲ್‌ ಗಾಂಧಿ ಅವರೇ ಸಂವಿಧಾನ ಪುಸ್ತಕ ಕೈನಲ್ಲಿ ಹಿಡಿಕೊಂಡು, ನಮಗೆಲ್ಲಾ ಪಾಠ ಮಾಡಿದ್ರಲ್ಲಾ? ಈಗ ರಾಜೀನಾಮೆ ಪಡೆದುಕೊಳ್ಳಿ ಎಂದು ಅಶೋಕ್‌ ಸವಾಲು ಎಸೆದರು.

ಮಾಜಿ ಸಚಿವ ಸುನೀಲ್‌ಕುಮಾರ್‌ ಮಾತನಾಡಿ, ಇಂದು ಆರಂಭವಾಗುವ ಪ್ರತಿಭಟನೆ ಜನಾಂದೋಲನವಾಗಲಿದೆ. ಇಂಥ ಭಂಡ ಸಿಎಂ ಅನ್ನು ರಾಜ್ಯ ನೋಡಿಲ್ಲ,ಸಿದ್ದರಾಮಯ್ಯ ನವರಿಗೆ ಇಂಥ ಭಂಡತನ ಬರಬಾರದಿತ್ತು ಎಂದು ಟೀಕಿಸಿದರು. ಕಳಂಕ ಹೊತ್ತ ಸಿಎಂ, ನ್ಯಾಯಾಲಯದ ಛೀಮಾರಿ ಹಾಕಿಸಿಕೊಂಡ ಸಿಎಂ ಆಡಳಿತ ನಡೆಸಲು ನೈತಿಕತೆ ಕಳೆದುಕೊಂಡಿದ್ದಾರೆ. ಮೂರು ತಿಂಗಳು ಹೊರಗಿರಿ, ನಿರ್ದೋಷಿಯಾದರೆ ಮತ್ತೆ ಸಿಎಂ ಆಗಿ. ಆಗ ಬೇಕಿದ್ದರೆ ದೆಹಲಿ ಥರ ಎರಡು ಕುರ್ಚಿ ಇಟ್ಟುಕೊಳ್ಳಿ. ಗೌರವ ಇದ್ದರೆ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.

ಮಾತೆತ್ತಿದರೆ ನೀವಿಲ್ವಾ ನಾವಲ್ವಾ ಎನ್ನುತ್ತಾರೆ. ನಿಮದು ಹೇಳಿ ಈಗ, ನಿಮ ಕಳಂಕ ಬಗ್ಗೆ ಮಾತಾಡಿ. ಯಡಿಯೂರಪ್ಪ ಇದ್ದಾಗ ಏನ್‌ ಮಾತಾಡಿದ್ರಿ, ನೆನಪಿಸಿಕೊಳ್ಳಿ. ನಿಮಗೆ ಎರಡು ನಾಲಿಗೆ ಇದೆ ಎಂದು ಹೇಳಲ್ಲ. ಆದರೆ ಎರಡು ನಾಲಿಗೆ ಇರೋರ ಹಾಗೆ ನಡೆದುಕೊಳ್ಳಬೇಡಿ ಎಂದರು. ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಹೈಕೋರ್ಟ್‌, ಜನಪ್ರತಿನಿಧಿಗಳ ಕೋರ್ಟ್‌ಗಳಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶವಾಗಿದೆ. ತನಿಖೆ ಎದುರಿಸುತ್ತೇನೆ, ರಾಜೀನಾಮೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಬಂಡತನ ತೋರುತ್ತಿದ್ದಾರೆ. ಮುಖ್ಯಮಂತ್ರಿಯಾದವರು ಈ ಮಟ್ಟಕ್ಕೆ ಇಳಿಯಬಾರದು ಎಂದು ವ್ಯಂಗ್ಯವಾಡಿದರು.

ವಿಪಕ್ಷ ನಾಯಕರಾಗಿದ್ದಾಗ ಅವಧಿಯಲ್ಲಿ ಸಿದ್ದರಾಮಯ್ಯನವರು ನೈತಿಕತೆ ಬಗ್ಗೆ ಬಹಳ ಮಾತನಾಡಿದ್ದರು ಎಂದು ಟೀಕಿಸಿದ ಅವರು, ಕೂಡಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು. ಮುಡಾ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ವಿರುದ್ಧ ಇಂದು ಎಫ್‌ಐಆರ್‌ ದಾಖಲಾಗುತ್ತದೆ. ಇಂಥ ಸಂದರ್ಭ ಬಂದಾಗ ಸಿದ್ದರಾಮಯ್ಯ ಮಾದರಿಯಾಗಿ ನಡೆದುಕೊಳ್ಳಬೇಕು. ಕ್ಲೀನ್‌ಚಿಟ್‌ ತಗೊಂಡು ಮತ್ತೆ ಬಂದು ಸಿಎಂ ಆಗಲಿ. ಯಾರೂ ತಡೆಯುವುದಿಲ್ಲ. ರಾಜೀನಾಮೆ ಕೊಟ್ಟು ಕೆಳಗಿಳಿದು ನೈತಿಕವಾಗಿ ಸರಿ ಇದ್ದೀನಿ ಎಂಬುದನ್ನು ಸಿದ್ದರಾಮಯ್ಯ ತೋರಿಸಲಿ ಎಂದು ಸವಾಲು ಹಾಕಿದರು.

RELATED ARTICLES

Latest News