ಬೆಂಗಳೂರು, ಜೂ.6- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅವಹೇಳನಕಾರಿ ಜಾಹೀರಾತು ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಂಸದ ರಾಹುಲ್ ಗಾಂಧಿಯವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಶೇ. 40 ಕಮಿಷನ್, ಸಿಎಂ ಹುದ್ದೆಗೆ 2,500 ಕೋಟಿ ರೂ. ಸೇರಿ ವಿವಿಧ ಆರೋಪಗಳ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ ಸಂಬಂಧ ಬಿಜೆಪಿಯ ಕೇಶವಪ್ರಸಾದ್ ಎಂಬುವರು ಸಿಎಂ, ಡಿಸಿಎಂ, ರಾಹುಲ್‌ಗಾಂಧಿ ವಿರುದ್ಧ ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು.
ಪ್ರತಿವಾದಿಯಾಗಿದ್ದ ರಾಹುಲ್‌ಗಾಂಧಿಯವರು ವಿಚಾರಣೆಗೆ ಹಾಜರಾಗದೇ ಇದ್ದುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ ಜೂ. 7 ರಂದು ಖುದ್ದು ಹಾಜರಾತಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ನಾಳೆ ರಾಹುಲ್‌ಗಾಂಧಿಯವರು ಜನಪ್ರತಿನಿಧಿಗಳ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.
ದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇಂಡಿ ಮೈತ್ರಿಕೂಟದ ನೇತೃತ್ವ ವಹಿಸಿರುವ ರಾಹುಲ್‌ಗಾಂಧಿಯವರು ಬಿಡುವಿಲ್ಲದ ಕಾರ್ಯದೊತ್ತಡದಲ್ಲಿದ್ದಾರೆ. ಈ ನಡುವೆ ರಾಹುಲ್‌ಗಾಂಧಿಯವರು ನಾಳೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿದೆ.