ಬೆಂಗಳೂರು, ಡಿ.4- ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ ಗಳ ಬೃಹತ್ ಗೆಲುವು ಸಾಧಿಸಿತ್ತು. ತಂಡದ ಪರ ಆರಂಭಿಕ ಆಟಗಾರನಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಎರಡು ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಅಡಿಲೇಡ್ ನಲ್ಲಿ ಡಿಸೆಂಬರ್ 6 (ಶುಕ್ರವಾರ) ದಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿರುವುದರಿಂದ ಯಶಸ್ವಿ ಜೈಸ್ವಾಲ್ ಜೊತೆಗೆ ಕೆ.ಎಲ್.ರಾಹುಲ್ ಅಥವಾ ರೋಹಿತ್ ಶರ್ಮಾ ಇಬ್ಬರಲ್ಲಿ ಯಾರು ಇನ್ನಿಂಗ್‌್ಸ ಆರಂಭಿಸುತ್ತಾರೆ ಎಂಬ ಯಕ್ಷಪ್ರಶ್ನೆ ಎದ್ದಿದೆ.
ಇತ್ತೀಚೆಗೆ ಪ್ರಧಾನಿ ಇಲೆವೆನ್ ತಂಡದ ವಿರುದ್ಧ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ರೊಂದಿಗೆ ರಾಹುಲ್ ಅವರೇ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ರೋಹಿತ್ ಶರ್ಮಾ ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಒಂದಂಕಿಗೆ ವಿಕೆಟ್ ಒಪ್ಪಿಸಿದ್ದರಿಂದ ಅಡಿಲೇಡ್ ಟೆಸ್ಟ್ ನಲ್ಲಿ ಮತ್ತೆ ಆರಂಭಿಕನಾಗಿ ಅಖಾಡಕ್ಕಿಳಿಯುವ ಸಾಧ್ಯತೆಗಳಿದ್ದು, ರಾಹುಲ್ ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.
ತಂಡದಲ್ಲಿ ಸ್ಥಾನ ಸಿಕ್ಕರೆ ಸಾಕು:ರಾಹುಲ್
`ನಾನು ತಂಡದಲ್ಲಿ ಸ್ಥಾನ ಪಡೆಯಲು ಸದಾ ಬಯಸುತ್ತೇನೆ. ನನ್ನ ತಂಡದ ಪರ ಆಡುವುದಷ್ಟೇ ನನ್ನ ಮುಖ್ಯ ಗುರಿಯಾಗಿದೆ. ಅಲ್ಲದೆ ಪಂದ್ಯದಲ್ಲಿ ಪರಿಸ್ಥಿತಿಗೆ ತಕ್ಕಂತೆ ಹೇಗೆ ರನ ಕಲೆಹಾಕಬಹುದು ಎಂಬುದರ ಕುರಿತು ಚಿಂತಿಸುತ್ತೇನೆ’ ಎಂದು ಕೆ.ಎಲ್.ರಾಹುಲ್ ತಿಳಿಸಿದ್ದಾರೆ.
`ಭಾರತ ತಂಡದ ಪರ ವಿವಿಧ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶ ಪಡೆದದ್ದು ನನ್ನ ಅದೃಷ್ಟವೇ ಸರಿ. ಮೊದಲಿಗೆ ನನ್ನ ಕ್ರಮಾಂಕವನ್ನು ಬದಲಿಸಿದಾಗ ನನಗೆ ರನ್ ಗಳಿಸುವುದು ನಿಜಕ್ಕೂ ದೈಹಿಕ ಹಾಗೂ ಮಾನಸಿಕವಾಗಿ ಸವಾಲಾಗಿತ್ತು. ಮೊದಲ 20- 25 ಎಸೆತಗಳನ್ನು ಯಾವ ರೀತಿ ಎದುರಿಸಬೇಕು? ಆರಂಭದಲ್ಲಿ ನಾನು ಯಾವ ರೀತಿ ಬೌಲರ್ ಗಳ ವಿರುದ್ಧ ಪ್ರಾಬಲ್ಯ ಸಾಧಿಸಬೇಕು? ಇಂತಹ ಸಣ್ಣ ಪುಟ್ಟ ಸಂಗತಿಗಳು ನನಗೆ ಸಮಸ್ಯೆಯಾಗಿತ್ತು. ಆದರೆ ಕಾಲ ಕಳೆದಂತೆ ವಿವಿಧ ಕ್ರಮಾಂಕದಲ್ಲಿ ಆಡುವುದು ನನಗೆ ಸುಲಭವಾಯಿತು’ ಎಂದು ರಾಹುಲ್ ತಿಳಿಸಿದ್ದಾರೆ.
ಅಂದಹಾಗೆ ಕೆ.ಎಲ್.ರಾಹುಲ್ ಇದೇ ಮೊದಲ ಬಾರಿ ಪಿಂಕ್ ಬಾಲ್ (ಹಗಲು ರಾತ್ರಿ) ಪಂದ್ಯ ಆಡುತ್ತಿದ್ದು ಇದು ಅವರಿಗೆ ಸವಾಲಾಗಿದೆ.