ಉಡುಪಿ, ಮೇ 27- ರೈಲ್ವೆ ಹಳಿ ಜಾರಿರುವುದನ್ನು ಪತ್ತೆಹಚ್ಚಿದ ಕೊಂಕಣ ರೈಲ್ವೆ ಮಾರ್ಗದ ಟ್ರ್ಯಾಕ್ ನಿರ್ವಾಹಕ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ.ಉಡುಪಿ ಸಮೀಪದ ಇನ್ನಂಜೆ ಮತ್ತು ಪಡುಬಿದ್ರೆ ಮಾರ್ಗದ ನಡುವೆ ರಾತ್ರಿ 2.25ರ ಸುಮಾರಿಗೆ ರೈಲ್ವೆ ಹಳಿ ಜಾರಿರುವುದನ್ನು ಟ್ರ್ಯಾಕ್ ನಿರ್ವಾಹಕ ಪ್ರದೀಪ್ ಶೆಟ್ಟಿ ಪತ್ತೆ ಮಾಡಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ರೈಲ್ವೆ ಹಳಿ ದೋಷದ ಬಗ್ಗೆ ಮಾಹಿತಿ ನೀಡಿದ್ದಾನೆ.
ಕೂಡಲೇ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ತಡೆಹಿಡಿದಿದ್ದಾರೆ. ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ದೋಷವನ್ನು ತ್ವರಿತವಾಗಿ ಸರಿಪಡಿಸಿದ್ದು, ಮುಂಜಾನೆ 5.50ರ 20 ಕಿಲೋ ಮೀಟರ್ ವೇಗದ ನಿರ್ಬಂಧದೊಂದಿಗೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ರೈಲ್ವೆ ಹಳಿ ನಿರ್ವಾಹಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌ಕುಮಾರ್ ಜಾ ಪ್ರದೀಪ್ ಶೆಟ್ಟಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ 25 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ನಂತರ ಮರುಸ್ಥಾಪಿತ ಟ್ರ್ಯಾಕ್‌ಸೈಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.ರೈಲ್ವೆ ಹಳಿ ದೋಷವನ್ನು ಸರಿಪಡಿಸುವವರೆಗೂ ಪ್ರಯಾಣಿಕರು ಕೆಲ ಗಂಟೆಗಳ ಕಾಲ ಪರದಾಡುವಂತಾಗಿತ್ತು. ಏನೇ ಆದರೂ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.