Saturday, July 27, 2024
Homeರಾಜ್ಯಕಡಿಮೆಯಾಯ್ತು ಮಳೆ, ಮತ್ತೆ ಹೆಚ್ಚಾಯ್ತು ತಾಪಮಾನ

ಕಡಿಮೆಯಾಯ್ತು ಮಳೆ, ಮತ್ತೆ ಹೆಚ್ಚಾಯ್ತು ತಾಪಮಾನ

ಬೆಂಗಳೂರು, ಮೇ 22- ರಾಜ್ಯದಲ್ಲಿ ಮೇ 24ರ ನಂತರ ಮಳೆಯ ಪ್ರಮಾಣ ಇಳಿಕೆಯಾಗಲಿದ್ದು, ಮತ್ತೆ ತಾಪಮಾನದಲ್ಲಿ ಏರಿಕೆ ಕಂಡುಬರುವ ಮುನ್ಸೂಚನೆಗಳಿವೆ. ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೆರೆಡು ದಿನ ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿದ್ದು, ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕೇರಳ ಭಾಗದಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವುದರಿಂದ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.

ಅಲ್ಲದೆ ಅರಬ್ಬಿಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಬೆಂಗಳೂರು, ಮಂಡ್ಯ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ವ್ಯಾಪಕ ಪ್ರಮಾಣದ ಮಳೆಯಾಗಿದ್ದರೆ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಉತ್ತರ ಕನ್ನಡ ಭಾಗದಲ್ಲಿ ಕೆಲವೆಡೆ ಹಗರುದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಹಗುರದಿಂದ ಸಾಧಾರಣ ಮಳೆ ಹಲವೆಡೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.ಮೇ 24 ರ ನಂತರ ಮಳೆ ಕಡಿಮೆಯಾಗಲಿದ್ದು, ಒಣಹವೆ ಕಂಡುಬರುತ್ತದೆ. ಇದರಿಂದ ತಾಪಮಾನದಲ್ಲಿ ಮತ್ತೆ ಹೆಚ್ಚಳ ಕಂಡುಬರಲಿದೆ. ನೈರುತ್ಯ ಮುಂಗಾರು ಮಾಸಾಂತ್ಯಕ್ಕೆ ಆರಂಭವಾಗುವ ಸಾಧ್ಯತೆಗಳಿರುವುದರಿಂದ ಈ ರೀತಿಯ ಬದಲಾವಣೆ ಸಹಜ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

RELATED ARTICLES

Latest News