ಬೆಂಗಳೂರು,ಆ.17- ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿರುವ ಮಳೆ ಆಗಸ್ಟ್ ಕೊನೆಯ ವಾರದಲ್ಲಿ ಅಬ್ಬರಿಸುವ ಸಾಧ್ಯತೆಗಳಿವೆ. ನಿರಂತರವಾಗಿ ಒಂದು ವಾರ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳು ಇವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕರಾವಳಿ, ಮಲೆನಾಡು ಹಾಗೂ ರಾಜ್ಯದ ಒಳನಾಡಿನಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಎಡೆಬಿಡದೆ ಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕೆಲವೆಡೆ ಭೂಕುಸಿತ, ಸಂಚಾರ ಕಡಿತ, ಮನೆ ಕುಸಿತ, ಜೀವ ಹಾನಿ, ಬೆಳೆ ನಷ್ಟ ಸಂಭವಿಸಿತ್ತು.
ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿಯು ಉಂಟಾಗಿ ಜನರು ತತ್ತರಿಸುವಂತಾಗಿತ್ತು.
ಆಗಸ್ಟ್ 12ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಒಳನಾಡಿನಲ್ಲೂ ಮಳೆ ಸದ್ಯಕ್ಕೆ ಬಿಡುವು ಕೊಟ್ಟಿದೆ. ಆ.23ರಿಂದ ಒಂದು ವಾರ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಮಳೆಯಾದಂತೆ ಕೊನೆಯ ವಾರದಲ್ಲೂ ವ್ಯಾಪಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಕಳೆದ ಒಂದು ವಾರದಿಂದ ಬಿಡುವು ನೀಡಿರುವ ಮಳೆ ಇನ್ನು ಒಂದು ವಾರ ಮುಂದುವರೆಯಲಿದ್ದು, ಒಣ ಹವೆ ಇರಲಿದೆ. ಸತತ ಮಳೆ ಹಾಗೂ ಅತಿವೃಷ್ಟಿಯಿಂದ ರೈತರಿಗೂ ಮಳೆಯ ಬಿಡುವಿನ ಅಗತ್ಯವಿತ್ತು. ಮತ್ತೆ ಮಳೆ ಬರುವುದರಿಂದ ಕೃಷಿಗೆ ಅನುಕೂಲಕರವಾಗಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಜೂನ್‍ನಿಂದ ಈತನಕ ರಾಜ್ಯದಲ್ಲಿ ವಾಡಿಕೆಗಿಂತ ಶೇ.23ರಷ್ಟು ಅಧಿಕ ಮಳೆಯಾಗಿದೆ. ಈ ಅವಧಿಯಲ್ಲಿ 594 ಮಿ.ಮೀ ವಾಡಿಕೆ ಮಳೆಯಾಗಿದ್ದು, 731 ಮಿ.ಮೀನಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.120, ಉತ್ತರ ಒಳನಾಡಿನಲ್ಲಿ ಶೇ.33, ಮಲೆನಾಡಿನಲ್ಲಿ ಶೇ.16ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಕರಾವಳಿ ಭಾಗದಲ್ಲಿ ಮಾತ್ರ ವಾಡಿಕೆ ಪ್ರಮಾಣದ ಮಳೆಯಾಗಿದೆ.
ಆಗಸ್ಟ್ 1ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 192 ಮಿ.ಮೀನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.55ರಷ್ಟು ಅಧಿಕ ಮಳೆಯಾಗಿದೆ. ಈ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 124 ಮಿ.ಮೀ. ದಕ್ಷಿಣ ಒಳನಾಡಿನಲ್ಲಿ 39 ಮಿ.ಮೀ ವಾಡಿಕೆ ಮಳೆಯಾಗಿದ್ದು, 137 ಮಿ.ಮೀ ಮಳೆಯಾಗುವ ಮೂಲಕ ವಾಡಿಕೆಗಿಂತ ಶೇ.253ರಷ್ಟು ಅತ್ಯಕ ಮಳೆಯಾಗಿದೆ.
ಅದೇ ರೀತಿ ಉತ್ತರ ಒಳನಾಡಿನಲ್ಲಿ ವಾಡಿಕೆಯ 62 ಮಿ.ಮೀಗೆ 96 ಮಿ.ಮೀನಷ್ಟು ಮಳೆಯಾಗಿದ್ದು, ಶೇ.55ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡು ಭಾಗದಲ್ಲಿ 254 ಮಿ.ಮೀ ವಾಡಿಕೆ ಮಳೆಯಾಗಿದ್ದು, 405 ಮಿ.ಮೀನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.59ರಷ್ಟು ಅಕ ಮಳೆಯಾಗಿದ್ದರೆ, ಕರಾವಳಿ ಭಾಗದಲ್ಲಿ 489 ಮಿ.ಮೀ ವಾಡಿಕೆ ಮಳೆಯಾಗಿದ್ದು, 517 ಮಿ.ಮೀನಷ್ಟು ಮಳೆಯಾಗಿದೆ. ವಾಡಿಕೆಗಿಂತ ಶೇ.6ರಷ್ಟು ಮಾತ್ರ ಹೆಚ್ಚು ಮಳೆಯಾದಂತಾಗಿದೆ.