ಬೆಂಗಳೂರು,ಅ.21- ಸಿಲಿಕಾನ್ ಸಿಟಿಯಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಮತ್ತೆ ನಗರ ನಿವಾಸಿಗಳನ್ನು ಹೈರಾಣಾಗುವಂತೆ ಮಾಡಿದೆ. ಕಳೆದ ಮಂಗಳವಾರ ಮತ್ತು ಬುಧವಾರ ನಿರಂತರವಾಗಿ ಮಳೆ ಸುರಿದು ಭಾರಿ ಅನಾಹುತವನ್ನು ಸೃಷ್ಟಿಸಿತ್ತು. ನಂತರ ಎರಡು ದಿನ ಬಿಡುವು ಕೊಟ್ಟಿದ್ದ ವರುಣ ಶನಿವಾರ ಸಂಜೆಯಿಂದ ಪ್ರಾರಂಭವಾದ ಮಳೆ ತಗ್ಗು ಪ್ರದೇಶದ ಹಲವು ಮನೆಗಳು ಹಾಗೂ ಅಪಾರ್ಟ್ಮೆಂಟ್‌ಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದರೆ, ಮತ್ತೊಂದೆಡೆ ರಸ್ತೆಗಳಲ್ಲಿ ಭಾರಿ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
ಬನ್ನೇರುಘಟ್ಟ ರಸ್ತೆಯ ವಿಜಯಶ್ರೀ ಲೇಔಟ್, ಹುಳಿಮಾವು ಮೆಟ್ರೊ ಸ್ಟೇಷನ್, ಈಜಿಪುರ, ನಾಗದೇವನಹಳ್ಳಿ, ಬ್ಯಾಟರಾಯನಪುರ, ಪುಲಕೇಶಿ ನಗರ, ಕಂಠೀರವ ಒಳಾಂಗಣ ಕ್ರೀಡಾಂಗಣ, ಶಿವಾನಂದ ಅಂಡರ್‌ಪಾಸ್, ವಿಂಡ್ಸರ್ ಮ್ಯಾನರ್, ಕೆಂಗೇರಿ, ಆರ್.ಆರ್.ನಗರ, ಎಲೆಕ್ಟಾನಿಕ್ ಸಿಟಿ, ಕುಮಾರಸ್ವಾಮಿ ಲೇ ಔಟ್, ಉತ್ತರಹಳ್ಳಿ, ವಿಲ್ಸನ್ ಗಾರ್ಡನ್, ಸ್ಯಾಂಕಿ ಅಂಡರ್‌ಪಾಸ್, ಓಕಳಿಪುರಂ, ಮೈಸೂರು ರಸ್ತೆ, ಶಿವನಹಳ್ಳಿ, ಕೆ.ಆರ್.ಪುರ, ಕೆರೆಮಾವು, ಚೌಡಪ್ಪ ಬಡಾವಣೆ, ಕಾವೇರಿ ಬಡಾವಣೆ ಸೇರಿದಂತೆ ನಗರದ ಬಹುತೇಕ ಜನನಿಬಿಡ ಪ್ರದೇಶಗಳಲ್ಲಿ ಜಲಾವೃತಗೊಂಡಿದ್ದು, ಒಂದು ರೀತಿ ದ್ವೀಪದಂತೆ ಮಾರ್ಪಟ್ಟಿದ್ದು, ನಿವಾಸಿಗಳು ಪರದಾಡುವಂತೆ ಮಾಡಿದೆ.
ಈಜಿಪುರದ ಮುಖ್ಯರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಕೆರೆಯಂತಾದ ರಸ್ತೆಯಲ್ಲೇ ಸವಾರರು ಸಾಹಸಪಟ್ಟು ವಾಹನಗಳನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದವು.
ಮೀನು ಹಿಡಿಯಲು ಮುಗಿಬಿದ್ದ ಜನ :
ವರ್ಷಧಾರೆ ಜೊತೆಗೆ ಬೆಂಗಳೂರಿಗರಿಗೆ ಮೀನಿನ ಭಾಗ್ಯ ದೊರೆತಿದ್ದು, ಆರ್.ಆರ್.ನಗರದ ಗಟ್ಟಿಗೆರೆಯ ಮುಖ್ಯರಸ್ತೆಯಲ್ಲಿ ಮೀನು ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಮೀನು ಹಿಡಿದು ಸಂತೋಷಪಟ್ಟರು. ಕೆರೆ ಉಕ್ಕಿ ಹರಿದು ನೀರು ರಸ್ತೆಗೆ ಬಂದಿದ್ದರಿಂದ ಮೀನುಗಳು ಕೊಚ್ಚಿಕೊಂಡು ಬಂದಿದ್ದು, ಜನರು ಬಲೆಯನ್ನು ಹಾಕಿ ಮೀನುಗಳನ್ನು ಹಿಡಿದರು.
ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಪಾರ್ಕಿಂಗ್‌ನಲ್ಲಿ ನಿಂತಿದ್ದ ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿ ಹಾಳಾಗಿದ್ದು, ಮಾಲಿಕರಿಗೆ ಭಾರಿ ನಷ್ಟ ತಂದೊಡ್ಡಿದೆ.
ಅದೇ ರೀತಿ ನಾಗದೇವನಹಳ್ಳಿಯ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನಿನ್ನೆ ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ ತಗ್ಗಿತ್ತು. ಈ ಸಂದರ್ಭದಲ್ಲಿ ಜನರು ಹೊರಬಂದು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮನೆ ಸೇರಿದ್ದರು. ಮತ್ತೆ ರಾತ್ರಿ ಸುರಿದ ಮಳೆ ಜಲದಿಗ್ಬಂಧನ ಹಾಕಿದೆ. ಬ್ಯಾಟರಾಯನಪುರದಲ್ಲಿ ಮನೆಗಳಿಗೆ ನೀರು ನುಗ್ಗಿ, ದಿನಸಿ ಸಾಮಗ್ರಿಗಳು, ಎಲೆಕ್ಟಾçನಿಕ್ ಉಪಕರಣಗಳು ನೀರಿನಲ್ಲಿ ತೇಲಾಡಿವೆ. ಪುಲಕೇಶಿನಗರ ಸೇರಿದಂತೆ ಬಹುತೇಕ ತಗ್ಗುಪ್ರದೇಶದ ಮನೆಗಳಿಗೆ ನೀರು ಹರಿದು ಭಾರಿ ಅನಾಹುತವನ್ನೇ ಸೃಷ್ಟಿಸಿದೆ.
ಬಿಟ್ಟೂಬಿಡದ ಮಳೆಯಿಂದಾಗಿ ಕೆ.ಆರ್.ಮಾರುಕಟ್ಟೆಯಲ್ಲಿ ಭಾರಿ ಅವಾಂತರವನ್ನೆ ಸೃಷ್ಟಿಸಿದ್ದು, ಮೊಣಕಾಲುದ್ದ ನೀರು ನಿಂತಿದ್ದು, ಮಳೆಯ ಜೊತೆಯಲಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡುಬAದರೆ, ಮತ್ತೊಂದೆಡೆ ವ್ಯಾಪಾರವೇ ಬೇಡ ಮನೆ ಸೇರಿದರೆ ಸಾಕು ಎಂದು ವ್ಯಾಪಾರಿಗಳು ಮನೆಗೆ ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು.
ಶಿವಾನಂದ ಅಂಡರ್‌ಪಾಸ್, ವಿಂಡ್ಸರ್ ಮ್ಯಾನರ್, ಸ್ಯಾಂಕಿ ಅಂಡರ್‌ಪಾಸ್, ಓಕಳಿಪುರಂ ರಸ್ತೆಗಳು ಕೆರೆಯಂತಾಗಿದ್ದು, ದ್ವಿಚಕ್ರ ವಾಹನ ಸವಾರರು, ಆಟೋಚಾಲಕರು ಪರದಾಡುವಂತಾಗಿತ್ತು. ನೀರಿನಲ್ಲೇ ವಾಹನ ಚಲಾಯಿಸಿದ್ದರಿಂದ ಎಂಜಿನ್ ಒಳಗೆ ನೀರು ಹೋಗಿ ವಾಹನಗಳು ಬಂದ್ ಆಗಿದ್ದು, ತಳ್ಳುತ್ತಾ ದಡ ಸೇರುವಂತಾಗಿತ್ತು. ಇದರಿಂದ ಆಟೊ, ದ್ವಿಚಕ್ರ ವಾಹನ ಸವಾರರಿಗೆ ತೀವ್ರ ಆರ್ಥಿಕ ಸಂಕಷ್ಟ ತಂದೊಡ್ಡಿದೆ.
ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು :
ಒಂದೆಡೆ ಮಳೆಯಿಂದ ಜನರು ಹೈರಾಣಾಗಿದ್ದರೆ ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಭೀತಿ ಜನರನ್ನು ಕಾಡುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತ್ಯಾಜ್ಯ ವಿಲೇವಾರಿಗೆ ತೊಂದರೆಯಾಗಿದ್ದು, ತ್ಯಾಜ್ಯ ಕೊಳೆತು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಕೆಲವು ಕಡೆ ಪೌರಕಾರ್ಮಿಕರು ಮಳೆಯಲ್ಲೇ ತ್ಯಾಜ್ಯ ಸಂಗ್ರಹಿಸುತ್ತಿದ್ದ ದೃಶ್ಯಗಳು ಕಂಡುಬಂದದವು.
ಸುರಕ್ಷತಾ ಕ್ರಮಕ್ಕೆ ಸೂಚನೆ :
ರಾಜಧಾನಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಸೂಚನೆ ನೀಡಿದೆ. ಮಳೆ ಸುರಿಯುವಾಗ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಪಾಲಿಕೆ ಸೂಚನೆ ನೀಡಿದೆ. ಮಳೆ ಬಂದಾಗ ಮರಗಳ ಕೆಳಗೆ ನಿಲ್ಲಬೇಡಿ ಹಾಗೂ ಕಾಂಕ್ರಿಟ್ ಗೋಡೆಗಳನ್ನು ಒರಗಿಕೊಂಡು ನಿಲ್ಲದಂತೆ ಸೂಚಿಸಲಾಗಿದ್ದು, ವಿದ್ಯುತ್‌ಕಂಬಗಳು, ಟ್ರಾನ್ಸ್‌ಫಾರಂ ಬಳಿ ಓಡಾಡುವಾಗ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
ಮಳೆಯಿಂದ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಚಾಲನೆ ವೇಳೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ತುರ್ತು ಸೇವೆಗಳಿಗಾಗಿ 1533 ಕ್ಕೆ ಸಂಪರ್ಕಿಸುವAತೆ ತಿಳಿಸಲಾಗಿದೆ.
ರೈನ್ ರೈನ್ ಗೋ ಅವೇ :
ಮಳೆಯಿಂದ ಹಿಂಡಿ ಹಿಪ್ಪೆಯಾಗಿರುವ ಸಿಲಿಕಾನ್ ಸಿಟಿ ಜನರು ಯಾವಾಗ ಮಳೆ ನಿಲ್ಲುತ್ತದೋ ಎಂದು ಮುಗಿಲು ನೋಡುತ್ತಿದ್ದರೂ ಸಹ ವರುಣ ತನ್ನ ಪ್ರತಾಪ ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಮಳೆ ನಿಂತರೆ ಸಾಕು ಎಂದು ರೈನ್ ರೈನ್ ಗೋ ಅವೇ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಎಲ್ಲೆಲ್ಲಿ, ಎಷ್ಟೆಷ್ಟು ಮಳೆ :
ಬೆಂಗಳೂರು ನಗರ 17.7 ಮಿ.ಮೀ.
ಬೆಂಗಳೂರು ನಗರ: 17.7 ಮಿ.ಮೀ
ಎಚ್‌ಎಎಲ್ ಏರ್ ಪೋರ್ಟ್ : 10.8.ಮಿ.ಮೀ
ಬೆಂಗಳೂರು ಗ್ರಾಮಾಂತರ: 25.0 ಮಿ.ಮೀ
ಬಾಗಲಗುಂಟೆ: 5.4 ಮಿ.ಮೀ
ಶೆಟ್ಟಿಹಳ್ಳಿ: 4.2 ಮಿ.ಮೀ
ನಂದಿನಿ ಲೇ ಔಟï: 3.3 ಮಿ.ಮೀ
ಹೇರೋಹಳ್ಳಿ: 2.9 ಮಿ.ಮೀ
ಕೆಂಗೇರಿ: 2.1 ಮಿ.ಮೀ
ರಾಜ್ಯದೆಲ್ಲೆಡೆ ವರುಣನ ಆರ್ಭಟ :
ಬೆಂಗಳೂರಲ್ಲದೆ, ತುಮಕೂರು, ಮೈಸೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕೋಲಾರ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಚಿಕ್ಕಮಗಳೂರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ವ್ಯಾಪಕವಾಗಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜಾಗರಣೆ ಮಾಡುವಂತಹ ಪರಿಸ್ಥಿತಿಯನ್ನು ತಂದೊಡ್ಡಿದ್ದರೆ ನಿನ್ನೆ ಹೊಲಗದ್ದೆ, ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ನಿನ್ನೆ ಸುರಿದ ಧಾರಕಾರ ಮಳೆಗೆ ದರ್ಪಣ ತೀರ್ಥ ನದಿಯ ಪ್ರವಾಹವು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣಕ್ಕೆ ನೀರು ನುಗ್ಗಿದ್ದು, ಭಕ್ತರು ಪರದಾಡುವಂತಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ರಸ್ತೆ ಮೇಲೆ ನೀರು ಹರಿದಿದ್ದು, ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ. ಒಟ್ಟಿನಲ್ಲಿ ಚಿತ್ತ ಮಳೆ ಒಂದಿಲ್ಲೊಂದು ಸಂಕಷ್ಟಗಳನ್ನು ತಂದೊಡ್ಡಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.