ಬೆಂಗಳೂರು,ಫೆ.15- ರಾಜ್ಯಸಭೆ ಚುನಾವಣೆಯಲ್ಲಿ ನಾವು ಏನು ರಾಜಕಾರಣ ಮಾಡಬಹುದು ಎಂಬುದು ಫೆಬ್ರವರಿ 27ನೇ ತಾರೀಖು ಗೊತ್ತಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಒಗ್ಗಟ್ಟಿನ ಪ್ರದರ್ಶನವನ್ನು ನಾವು ಮಾಡುತ್ತೇವೆ. ರಾಜ್ಯಸಭೆ ಚುನಾವಣೆಗೆ ಫೆ.27ರಂದು ಮತದಾನ ನಡೆದು ಅಂದೇ ಮತದಾನ ಎಣಿಕೆಯಾಗಿ ಫಲಿತಾಂಶ ಹೊರಬರಲಿದೆ. ರಾಜಕಾರಣ ಏನು ಎಂಬುದನ್ನು ಅಲ್ಲಿಯವರೆಗೆ ನೋಡುತ್ತಾ ಇರಿ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ವಿಫಲವಾಗಿರುವುದಕ್ಕೆ ಬಿಜೆಪಿ ಜೊತೆ ಹೋಗಿದ್ದು, ಎರಡು ಪಕ್ಷಗಳು ಒಟ್ಟಿಗೆ ಸೇರಿ ಹೊಸ ನಂಟಸ್ತಿಕೆ ಮಾಡುತ್ತಿವೆ. ಅಲ್ಲಿರುವಂತವರು ಅವರ ಆತ್ಮಸಾಕ್ಷಿ ಮತವನ್ನು ನಮಗೆ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು. ಮತದಾನದ ನಂತರ ಎಷ್ಟು ಮತಗಳು ಬರಲಿವೆ ಎಂಬುದನ್ನು ತಿಳಿಸುತ್ತೇವೆ ಎಂದರು.
ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಜಯ್ ಮಕೇನ್ ಅವರ ಕುಟುಂಬ ತ್ಯಾಗ ಮಾಡಿದೆ. ದೇಶದ ಐಕ್ಯತೆ, ಶಾಂತಿಗಾಗಿ ಪ್ರಾಣ ತ್ಯಾಗ ಮಾಡಿದೆ. ವಿದ್ಯಾರ್ಥಿಯಿಂದಲೇ ಸಂಘಟನೆ ಮಾಡಿದ್ದಾರೆ. ನಮ್ಮ ಪಕ್ಷದ ಆಧಾರ ಸ್ತಂಭ ಅದಕ್ಕಾಗಿ ಬಹಳ ಸಂತೋಷದಿಂದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು.ಬಿಜೆಪಿ, ಜೆಡಿಎಸ್‍ನವರು ಈ ಹಿಂದೆ ಹೊರಗಿನವರನ್ನು ಕರೆತಂದು ಸ್ಪರ್ಧೆಗಿಳಿಸಿದ್ದರಲ್ಲ ಅದರ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.
ಲೋಕಸಭಾ ಚುನಾವಣೆ : ಬೆಂಗಳೂರಿನಿಂದ ರಾಜೀವ್ ಚಂದ್ರಶೇಖರ್ ಸ್ಪರ್ಧೆ..?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂದು ರಾಜ್ಯಸಭೆ ಚುನಾವಣೆಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿ ರಾಜ್ಯಸಭೆಗೆ ಹೋಗಿ ರಾಜ್ಯಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರು. ಜೆಡಿಎಸ್‍ನಿಂದ ಕುಪೇಂದ್ರ ರೆಡ್ಡಿ ಅವರು ಸ್ಪರ್ಧೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಪ್ರಯತ್ನವನ್ನು ಅವರು ಮಾಡಲಿ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು ಎಷ್ಟು ಮತಗಳು ಬೇಕೋ ಅಷ್ಟು ಮತಗಳು ನಮ್ಮ ಬಳಿ ಇವೆ. ಬಿಜೆಪಿ-ಜೆಡಿಎಸ್‍ನಿಂದ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.