Thursday, November 21, 2024
Homeಬೆಂಗಳೂರುಬೆಂಗಳೂರಿನಲ್ಲಿ ರಾಮನವಮಿ ಸಂಭ್ರಮ, ಗಲ್ಲಿಗಲ್ಲಿಗಳಲ್ಲಿ ರಾಮನಾಮಜಪ

ಬೆಂಗಳೂರಿನಲ್ಲಿ ರಾಮನವಮಿ ಸಂಭ್ರಮ, ಗಲ್ಲಿಗಲ್ಲಿಗಳಲ್ಲಿ ರಾಮನಾಮಜಪ

ಬೆಂಗಳೂರು, ಏ.17- ರಾಜಧಾನಿ ಬೆಂಗಳೂರಿನಲ್ಲಿ ಶ್ರೀ ರಾಮನವಮಿಯ ಸಡಗರ ಮುಗಿಲು ಮುಟ್ಟಿತ್ತು. ಗಲ್ಲಿಗಲ್ಲಿಗಳಲ್ಲಿ ರಾಮನ ಜೈಕಾರದ ಘೋಷಣೆ ಮೊಳಗಿತು. ಎಲ್ಲೆಡೆ ರಾಮನವಮಿಯ ಆಚರಣೆ ಪಾನಕ, ಕೋಸಂಬರಿ ವಿತರಣೆ ಜೋರಾಗಿತ್ತು. ಶ್ರೀರಾಮನವಮಿಯನ್ನು ಸಡಗರ ಸಂಭ್ರಮದಿಂದ, ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮನೆಗಳಲ್ಲಿ ಅಷ್ಟೇ ಅಲ್ಲ ನಗರದ ವೃತ್ತಗಳಲ್ಲಿ, ಮುಖ್ಯರಸ್ತೆಗಳಲ್ಲಿ, ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರವನ್ನು ಇಟ್ಟು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಿಸುತ್ತಿದ್ದುದು ಕಂಡುಬಂತು.

ಶ್ರೀರಾಮ ಮಂದಿರ, ಆಂಜನೇಯಸ್ವಾಮಿ ದೇಗುಲ, ಇಸ್ಕಾನ್, ರಾಯರ ಮಠ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಶ್ರೀರಾಮ ಮೂರ್ತಿಗೆ ಹಣ್ಣು- ಹೂವುಗಳಿಂದ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಮುಂತಾದ ಪೂಜಾ ಕಾರ್ಯಕ್ರಮಗಳು ಬೆಳಗ್ಗೆಯಿಂದ ನೆರವೇರಿದವು.

ಭಕ್ತಾದಿಗಳು ತಂಡೋಪತಂಡವಾಗಿ ರಾಮ ದೇವಾಲಯಗಳಿಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಮಾಡಿ ಪುಳಕಿತರಾದರು.ಕೆಲವೆಡೆ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು. ಮನೆ ಮನೆಗಳಲ್ಲಿಯೂ ಸಹ ಬೆಲೆ ಏರಿಕೆಯ ನಡುವೆಯೂ ಮಹಿಳೆಯರು ಹೂವು, ವೀಳ್ಯದೆಲೆ, ಕರ್ಪೂರ, ಹಣ್ಣು ಇತ್ಯಾದಿಗಳನ್ನು ಖರೀದಿಸಿ, ಮನೆಗಳಲ್ಲಿ ಮರ್ಯಾದಾ ಪುರುಷೋತ್ತಮನನ್ನು ಪೂಜಿಸಿ ಧನ್ಯತಾ ಭಾವ ಹೊಂದಿದರು.

ಹಲವು ದೇವಾಲಯಗಳಲ್ಲಿ ಶ್ರೀರಾಮನ ಸಂಗೀತ, ಹರಿಕಥಾ ಕಾಲಕ್ಷೇಪ ಕಾರ್ಯಕ್ರಮ, ಭಜನೆಗಳು ನಡೆದವು.ಐಟಿ-ಬಿಟಿ ಕಚೇರಿ, ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲಿ ರಾಮನ ಆರಾಧನೆ ಮಾಡಲಾಯಿತು.ಎಳೆಯ ಮಕ್ಕಳಿಗೆ ರಾಮ-ಸೀತೆಯ ಪೊಷಾಕುಗಳನ್ನು ಹಾಕಿ ಪೊಷಕರು ಸಂಭ್ರಮಿಸಿದರು. ಒಟ್ಟಾರೆ ಹೈಟೆಕ್ ಸಿಟಿ ಬೆಂಗಳೂರು ಶ್ರೀರಾಮನವಮಿಯ ದಿನವಾದ ಇಂದು ರಾಮಮಯವಾಗಿತ್ತು.

RELATED ARTICLES

Latest News