ಬೆಂಗಳೂರು, ಸೆ.28- ಶತಮಾನದ ಇತಿ ಹಾಸವಿರುವ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ನೂತನ ಅಧ್ಯಕ್ಷರಾಗಿ ರಮೇಶ್ ಚಂದ್ರ ಲಹೋಟಿ ಅವರು ಆಯ್ಕೆಯಾಗಿದ್ದಾರೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆಯಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕೆ, ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಉದ್ಯಮಿಗಳು ಕಣದಲ್ಲಿದ್ದರು.
ಸಂಪ್ರದಾಯದಂತೆ ಹಿರಿಯ ಉದ್ಯಮಿ ರಮೇಶ್ ಚಂದ್ರ ಲಹೋಟಿ ಅವರು ಅಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಎಂ.ಜಿ.ಬಾಲಕೃಷ್ಣ ಹಾಗೂ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಬುಂಟು ಸಂಘಟನೆ (ಮಹಿಳಾ ಉದ್ಯಮಿಗಳ ಒಕ್ಕೂಟ)ಯಲ್ಲಿ ಗುರುತಿಸಿಕೊಂಡಿರುವ ಉಮಾರೆಡ್ಡಿ ಅವರು ಈಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಮಹಿಳಾ ವಲಯಕ್ಕೆ ದೊಡ್ಡ ಯಶಸ್ಸು ಸಿಕ್ಕಿದಂತಾಗಿದೆ. ವಲ್ರ್ಡ್ ಟ್ರೇಡ್ ಸೆಂಟರ್ ಸಲಹೆಗಾರರಾಗಿ ಈಮರ್ಗ್‍ನ ಸಹ ಸಂಸ್ಥಾಪಕರಾಗಿರುವ ಉಮಾರೆಡ್ಡಿ ಅವರು ಪ್ರಸ್ತುತ ಹೈಟೆಕ್ ಮ್ಯಾಗ್ನೆಟಿಕ್ಸ್ ಅಂಡ್ ಎಲೆಕ್ಟ್ರಾನಿಕ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಇನ್ನು ಭಾರೀ ಮತ್ತು ಮಧ್ಯಮ ಕೈಗಾರಿಕಾ ವಲಯದಿಂದ ಅಭಿಮಾನಿ ಪಬ್ಲಿಕೇಷನ್ ಸಿಇಒ ವಿ.ಶ್ರೀನಿವಾಸ್ ಅವರು ಆಯ್ಕೆಯಾಗಿದ್ದಾರೆ. ಇದರ ಜತೆಗೆ ಲೆಸ್ಸಿ ಲಾರೆನ್ಸ್ ,ತಿಪ್ಪೇಶಪ್ಪ ಬಿ.ಸಿ. ಅವರು ಚುನಾಯಿತರಾಗಿದ್ದಾರೆ. ಇನ್ನು ಇದರ ಸೇವಾ ವಲಯದಲ್ಲಿ ವಾಸವಿ ವಿದ್ಯಾನಿಕೇತನ ಟ್ರಸ್ಟಿ ಹಾಗೂ ರೇಮಂಡ್ಸ್ ಮಾರಾಟ ಉದ್ಯಮದಲ್ಲಿರುವ ಬಿ.ಎ.ಅಭಿಷೇಕ್, ಕೀರ್ತನ್ ಕುಮಾರ್, ಪೆರುಮಾಳ್, ಸುರೇಶ್‍ಬಾಬು, ಸುಸೀಮಾ ವಿದ್ಯಾರತ್ನರಾಜ್ ಅವರು ಚುನಾಯಿತರಾಗಿದ್ದಾರೆ.