Thursday, November 21, 2024
Homeರಾಜ್ಯಬಾಂಬ್ ಸ್ಫೋಟ ಪ್ರಕರಣ: ದುಷ್ಕರ್ಮಿಯ ರೇಖಾಚಿತ್ರ ತಯಾರಿಸಿ ಕಾರ್ಯಾಚರಣೆ

ಬಾಂಬ್ ಸ್ಫೋಟ ಪ್ರಕರಣ: ದುಷ್ಕರ್ಮಿಯ ರೇಖಾಚಿತ್ರ ತಯಾರಿಸಿ ಕಾರ್ಯಾಚರಣೆ

ಬೆಂಗಳೂರು, ಮಾ.4- ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿ ಮಿಂಚಿನಂತೆ ಮರೆಯಾಗಿರುವ ದುಷ್ಕರ್ಮಿಯ ರೇಖಾಚಿತ್ರವನ್ನು ನಗರ ಪೊಲೀಸರು ತಯಾರಿಸಿದ್ದಾರೆ. ಕಳೆದ ಶುಕ್ರವಾರ ಮಧ್ಯಾಹ್ನ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಗೆ ಬಸ್‍ನಲ್ಲಿ ಬಂದು ತಿಂಡಿ ತಿಂದು ಕೈ ತೊಳೆಯುವ ಜಾಗದಲ್ಲಿ ತಾನು ತಂದಿದ್ದ ಕಪ್ಪು ಬಣ್ಣದ ಬ್ಯಾಗ್‍ನ್ನು ಇಟ್ಟು ಹೋಗಿರುವ ಪ್ರತಿಯೊಂದು ದೃಶ್ಯಾವಳಿಗಳು ಕೆಫೆಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಆರೋಪಿಯು ಸುಮಾರು 25ರಿಂದ 30 ವರ್ಷದವನಂತೆ ಕಾಣುತ್ತಿದ್ದು, ಶರ್ಟ್, ಪ್ಯಾಂಟ್ ಧರಿಸಿ ನಂ.10 ಸಂಖ್ಯೆ ಇರುವ ಟೋಪಿ ಹಾಕಿಕೊಂಡು, ಕೂಲಿಂಗ್ ಗ್ಲಾಸ್, ಕಲರ್ ಮಾಸ್ಕ್ ಧರಿಸಿರುವುದು ಸಿಸಿ ಟಿವಿಯ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಅಲ್ಲದೆ ಆತ ಬಸ್ ಇಳಿದು ಹೋಟೆಲ್‍ಗೆ ಅತಿವೇಗವಾಗಿ ಟೈಮ್ ನೋಡಿಕೊಂಡು ಬರುವ ದೃಶ್ಯ ಹಾಗೂ ಮರದ ಮರೆಯಲ್ಲಿ ನಿಂತು ಎಲ್ಲೆಲ್ಲಿ ಸಿಸಿಕ್ಯಾಮೆರಾಗಳಿವೆ, ಯಾವ ಗ್ರಾಹಕರು ಹೋಟೆಲ್‍ಗೆ ಬರುತ್ತಿದ್ದಾರೆ ಎಂಬುದನ್ನು ಸಹ ಆತ ಗಮನಿಸುತ್ತಿರವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಎಲ್ಲಾ ದೃಶ್ಯಾವಳಿಗಳನ್ನು ಆಧರಿಸಿ ನಗರ ಪೊಲೀಸರು ದುಷ್ಕರ್ಮಿಯ ರೇಖಾಚಿತ್ರವನ್ನು ತಯಾರಿಸಿ ಆತನ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇನ್ನೂ ಪತ್ತೆಯಾಗದ ಆರೋಪಿ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ಪರಾರಿಯಾಗಿರುವ ಆರೋಪಿ ಇನ್ನೂ ಸಿಕ್ಕಿಲ್ಲ. ಘಟನೆ ನಡೆದು ನಾಲ್ಕು ದಿನಗಳಾದರೂ ನಿಖರವಾಗಿ ದುಷ್ಕರ್ಮಿ ಯಾರೆಂಬುದು ನಗರ ಪೊಲೀಸರಿಗೆ ತಿಳಿದುಬಂದಿಲ್ಲ.
ಕಳೆದ ಶುಕ್ರವಾರದಿಂದ ಸಿಸಿಬಿ ಪೊಲೀಸರು ಸೇರಿದಂತೆ 8 ವಿಶೇಷ ತಂಡಗಳು ನಿರಂತರವಾಗಿ ಆರೋಪಿ ಪತ್ತೆ ಕಾರ್ಯದಲ್ಲಿ ತೊಡಗಿವೆಯಾದರೂ ಸಹ ಆತ ಸಿಕ್ಕಿಲ್ಲ. ಸಿಸಿಬಿ ಪೊಲೀಸರ ಒಂದು ತಂಡ ಆರೋಪಿ ಮೊಬೈಲ್ ಬಳಸಿರಬಹುದೆಂದು ಟವರ್ ಡಂಪ್ ಹಾಗೂ ಸಿಡಿಆರ್‍ನ್ನು ಅನಾಲಿಸಿಸ್ ಮಾಡುತ್ತಿದೆ.

ಮತ್ತೊಂದು ತಂಡ ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಗಡಿವರೆಗೆ ಹಾಗೂ ಕೆಫೆಯಿಂದ ವೈಟ್‍ಫೀಲ್ಡ್ ಮಾರ್ಗದಲ್ಲಿ ಚನ್ನಸಂದ್ರ, ಸರ್ಜಾಪುರ ಮಾರ್ಗದ ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿದರೂ ಸಹ ಆರೋಪಿ ಬಾಂಬ್ ಇಟ್ಟ ಬಳಿಕ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಮತ್ತೊಂದೆಡೆ ಆರೋಪಿಯು ಬಾಂಬ್ ಇಡುವ ವೇಳೆ ಧರಿಸಿದ್ದ ಶರ್ಟ್ ಹಾಗೂ ಪ್ಯಾಂಟ್ ಬದಲಾಯಿಸಿ ಟೀ-ಶರ್ಟ್, ಜೀನ್ಸ್‍ಪ್ಯಾಂಟ್ ಧರಿಸಿ ಪರಾರಿಯಾಗಿದ್ದಾ ನೆಂಬ ಶಂಕೆಯು ವ್ಯಕ್ತವಾಗಿದೆ. ಅಲ್ಲದೆ, ಆರೋಪಿ ಎರಡು-ಮೂರು ಬಸ್‍ಗಳನ್ನು ಬದಲಾಯಿಸಿ ರಾಜ್ಯದ ಗಡಿ ಬಿಟ್ಟು ಹೊರರಾಜ್ಯಕ್ಕೆ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.

ಹಾಗಾಗಿ ಮಹಾರಾಷ್ಟ್ರ ಹಾಗೂ ತೆಲಂಗಾಣ ಎಟಿಸಿ ಹಾಗೂ ಕೌಂಟರ್ ಇಂಟಿಲಿಜೆನ್ಸ್ ಸೆಲ್‍ಟಿನ್ ಸಂಪರ್ಕದಲ್ಲಿ ನಗರ ಪೊಲೀಸರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತನಿಖಾ ತಂಡಗಳು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿಯ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿಗಾಗಿ ಶೋಧ ನಡೆಸುತ್ತಿವೆ.

ಆರೋಪಿಯು ರಾಮೇಶ್ವರ ಕೆಫೆಗೆ ಬಸ್‍ನಲ್ಲಿ ಬಂದಿದ್ದು, ರವೆ ಇಡ್ಲಿ ತಿಂದು ಕೈತೊಳೆಯುವ ಜಾಗದಲ್ಲಿ ಬಾಂಬ್ ಇಟ್ಟು ಬಂದ ದಾರಿಯಲ್ಲಿ ಹೋಗದೆ ಬೇರೆ ರಸ್ತೆಯ ಮುಖಾಂತರ ಪರಾರಿಯಾಗಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

RELATED ARTICLES

Latest News