Monday, October 7, 2024
Homeರಾಜ್ಯನಿಗಮ ಮಂಡಳಿಗಳ ನೇಮಕಾತಿ : ಸುರ್ಜೆವಾಲ ಮಹತ್ವದ ಸಭೆ

ನಿಗಮ ಮಂಡಳಿಗಳ ನೇಮಕಾತಿ : ಸುರ್ಜೆವಾಲ ಮಹತ್ವದ ಸಭೆ

ಬೆಂಗಳೂರು,ಜ.21- ನಿಗಮ ಮಂಡಳಿಗಳ ನೇಮಕಾತಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಶಾಸಕರ ಅಧ್ಯಕ್ಷತೆ ಪಟ್ಟಿಯನ್ನು ಅಖೈರುಗೊಳಿಸಿದ್ದಾರೆ.

ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯ ಅಂತಿಮ ಸ್ಪರ್ಶಕ್ಕಾಗಿ ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಕೆಲವು ನಾಯಕರು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸಭೆ ನಡೆಸಿದರು. ಸುಮಾರು 2 ತಿಂಗಳಿನಿಂದಲೂ ನಿಗಮ ಮಂಡಳಿಗಳ ನೇಮಕಾತಿ ಇಂದು, ನಾಳೆ ಎನ್ನುತ್ತಲೇ ಮುಂದೂಡಿಕೆಯಾಗುತ್ತಿದೆ. ಸಂಕ್ರಾಂತಿ ಹಬ್ಬದ ಬಳಿಕ ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಈ ಕ್ಷಣಕ್ಕೆ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಘೋಷಿಸಿದ್ದರು.

ಆದರೆ ಮೂರ್ನಾಲ್ಕು ದಿನ ಕಳೆದರೂ ನೇಮಕಾತಿ ಪಟ್ಟಿ ಹೊರಬಂದಿಲ್ಲ. ಇದು ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ. 34 ಮಂದಿ ಶಾಸಕರು ಹಾಗೂ 39 ಮಂದಿ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದರು. ಅದರ ಬಳಿಕವೂ ಮತ್ತಷ್ಟು ಹೆಸರುಗಳ ಸೇರ್ಪಡೆಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.

ರಾಮೋತ್ಸವ ಶುಭ ಸಂದರ್ಭದಲ್ಲಿ “ಜಾನಕಿ ರಾಮ” ಆಲ್ಬಂ ಸಾಂಗ್ ಬಿಡುಗಡೆ

ಇಂದಿನ ಸಭೆಯಲ್ಲಿ 37 ಶಾಸಕರ ಹಾಗೂ 39 ಕಾರ್ಯಕರ್ತರ ನಿಗಮ ಮಂಡಳಿಯ ಹಂಚಿಕೆ ಕುರಿತು ಚರ್ಚೆ ನಡೆಸಲಾಗಿದೆ. ಶಾಸಕರಿಗೆ ಯಾವ ಯಾವ ನಿಗಮಗಳನ್ನು ಹಂಚಿಕೆ ಮಾಡಬೇಕೆಂದು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ನಿಗಮಮಂಡಳಿಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರನ್ನು ನೇಮಿಸುವ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಆದರೆ ಯಾರಿಗೆ, ಯಾವ ನಿಗಮ ಎಂದು ಇನ್ನೂ ಇತ್ಯರ್ಥಗೊಂಡಿಲ್ಲ. ಹೀಗಾಗಿ ಇಂದಿನ ಸಭೆಯಲ್ಲಿ ಮತ್ತಷ್ಟು ಚರ್ಚೆಗಳು ನಡೆದಿವೆ.

ಶಾಸಕರ ಆಯ್ಕೆ ಪಟ್ಟಿ ಮತ್ತು ನಿಗಮಗಳ ನಿಗ ಪೂರ್ಣಗೊಂಡಿದೆ. ಅದನ್ನು ಮೊದಲ ಹಂತದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. 2ನೇ ಹಂತದಲ್ಲಿ ಕಾರ್ಯಕರ್ತರಿಗೆ ನಿಗಮಗಳನ್ನು ಹಂಚಿಕೆ ಮಾಡಿ ಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಪಡಿಸಲು ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಿಗೆ ಅವಕಾಶ ನೀಡಬೇಕು ಎಂಬ ನಿಲುವು ಹೊಂದಿದ್ದಾರೆ. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕಾಗಿ ದುಡಿಯುವ ಶಾಸಕರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ರ ಪ್ರತಿಪಾದನೆಯಾಗಿದೆ. ಹೀಗಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿತ್ತು.

ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಸಲಾಗಿದೆ. 2 ಕ್ಕಿಂತ ಹೆಚ್ಚು ಬಾರಿ ಶಾಸಕರಾಗಿರುವ ಹಿರಿಯರಿಗೆ ನಿಗಮಮಂಡಳಿಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲು ಚರ್ಚೆ ನಡೆಸಲಾಗುತ್ತಿದೆ. ನಿರೀಕ್ಷೆಯಂತೆ ಎಲ್ಲವೂ ಹೊಂದಾಣಿಕೆಯಾದರೆ ಇಂದು ಅಥವಾ ನಾಳೆಯೊಳಗೆ ನಿಗಮ ಮಂಡಳಿಗಳ ಪಟ್ಟಿ ಬಹಿರಂಗಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News