ಭಾವಾನಗರ,ಡಿ.8- ಖೈದಿಯೊಬ್ಬ ಗುದನಾಳದಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡಿದ್ದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಅಲ್ಲಿನ ಭಾವನಗರ ಬಂಧಿಖಾನೆಯಲ್ಲಿ ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ರವಿ ಬಾರಯ್ಯ ಎಂಬ ಖೈದಿ ಪೊಲೀಸರಿಂದ ತನ್ನ ಮೊಬೈಲ್ ಫೋನ್ ಮರೆ ಮಾಚಲು ಅದನ್ನು ತನ್ನ ಗುದನಾಳದಲ್ಲಿ ಬಚ್ಚಿಟ್ಟುಕೊಂಡಿದ್ದ ಎನ್ನಲಾಗಿದೆ.
ಆರೋಪಿಯ ವಿಚಿತ್ರ ವರ್ತನೆ ಗಮನಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆಯ ನಂತರ ವೈದ್ಯರು ಎಕ್ಸ್ ರೇ ಕಂಡು ಬೆಚ್ಚಿ ಬಿದ್ದಿದ್ದಾರೆ. ಅದರಲ್ಲಿ ಕೈದಿಯ ಗುದನಾಳದಲ್ಲಿ ಮೊಬೈಲ್ ಫೋನ್ ಇರುವುದು ಕಂಡುಬಂದಿದೆ.
ಜೈಲಿನೊಳಗೆ ಮೊಬೈಲ್ ಫೋನ್‌ಗಳನ್ನು ಬಳಸುವಂತಿಲ್ಲ. ಆದರೆ ಡಿಸೆಂಬರ್ 4 ರಂದು ಕಾರಾಗಹಕ್ಕೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮೊಬೈಲ್ ಫೋನ್ ಚಾರ್ಜರ್ ಪತ್ತೆಯಾದಾಗ ಅಧಿಕಾರಿಗಳಿಗೆ ಅನುಮಾನ ಬಂದಿದೆ.
ಎಲ್ಲಾ ಕಡೆ ಹುಡುಕಾಡಿದರೂ ಫೋನ್ ಸಿಗದಿದ್ದಾಗ ಬಾರಯ್ಯನ ವಿಚಿತ್ರ ವರ್ತನೆ ಕಂಡು ಪೊಲೀಸರು ಅನುಮಾನಗೊಂಡು ಆತನ ಸೆಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಫೋನ್ ಪತ್ತೆಯಾಗಿಲ್ಲ. ಆದಾಗ್ಯೂ, ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಎಕ್ಸ್ ರೇ ತೆಗೆಸಲಾಯಿತು. ಸ್ಕ್ಯಾನ್ ಮಾಡಿದಾಗ ಗುದದ್ವಾರದಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ.
ಇದರಿಂದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಘಟನೆಯ ಬಗ್ಗೆ ಜೈಲು ಅಧಿಕಾರಿಗಳು ದೂರು ನೀಡಿದಾಗ, ಕೈದಿಗಳ ಕಾಯ್ದೆಯ ಬಿಎನ್‌ಎಸ್ 223, ಸೆಕ್ಷನ್ 42, 43 ಮತ್ತು 45(12) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ನಿಷೇಧಿತ ಮೊಬೈಲ್ ಫೋನ್ ಮತ್ತು ಚಾರ್ಜರ್ ಅನ್ನು ಜೈಲಿಗೆ ತಂದವರು ಯಾರು? ರವಿ ಎಷ್ಟು ಸಮಯದಿಂದ ಫೋನ್ ಬಳಸುತ್ತಿದ್ದ ಎಂದು ಜೈಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.