ಚಂಡೀಗಢ, ಅ. 2 (ಪಿಟಿಐ)– ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಮತ್ತು ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು 20 ದಿನಗಳ ಪೆರೋಲ್ ಮಂಜೂರು ಮಾಡಿದ ನಂತರ ಹರಿಯಾಣದ ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ಇಂದು ಹೊರ ಬಂದಿದ್ದಾರೆ.
ಅವರ ತಾತ್ಕಾಲಿಕ ಬಿಡುಗಡೆ ಅವಧಿಯಲ್ಲಿ ಸಿಂಗ್ ಉತ್ತರ ಪ್ರದೇಶದ ಬಾಗ್‌ಪತ್‌ನ ಬರ್ನಾವಾದಲ್ಲಿರುವ ಡೇರಾ ಆಶ್ರಮದಲ್ಲಿ ಉಳಿಯಲಿದ್ದಾರೆ.ಪೆರೋಲ್ ಮೇಲೆ ಬಿಡುಗಡೆಯಾದ ಬಳಿಕ ಇಂದು ಬೆಳಗ್ಗೆ ಅವರು ಬಿಗಿ ಭದ್ರತೆಯಲ್ಲಿ ಜೈಲಿನಿಂದ ಹೊರಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹರಿಯಾಣ ಸರ್ಕಾರವು ಸಿಂಗ್ ಅವರಿಗೆ 20 ದಿನಗಳ ಪೆರೋಲ್ ನೀಡಿದ್ದು, ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ, ಭಾಷಣ ಮಾಡುವುದನ್ನು ಮತ್ತು ಅವಧಿಯಲ್ಲಿ ರಾಜ್ಯದಲ್ಲಿ ಉಳಿಯುವುದನ್ನು ನಿರ್ಬಂಧಿಸಿದೆ.
2017ರಲ್ಲಿ ತನ್ನ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಿಂಗ್ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾರೆ. 16 ವರ್ಷಗಳ ಹಿಂದೆ ಪತ್ರಕರ್ತನ ಹತ್ಯೆಗೆ 2019 ರಲ್ಲಿ ಡೇರಾ ಮುಖ್ಯಸ್ಥ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಲಾಯಿತು.
ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಅವರು 20 ದಿನಗಳ ಪೆರೋಲ್ ಕೋರಿದ್ದರು. ಪೆರೋಲ್ ಷರತ್ತುಗಳ ಪ್ರಕಾರ, ಪಂಥದ ಮುಖ್ಯಸ್ಥರು ಯಾವುದೇ ಚುನಾವಣಾ-ಸಂಬಂಧಿತ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಅಥವಾ ಸಾರ್ವಜನಿಕ ಭಾಷಣಗಳನ್ನು ಮಾಡುವುದಿಲ್ಲ ಮತ್ತು ಅವಧಿಯಲ್ಲಿ ಹರಿಯಾಣದಿಂದ ಹೊರಗುಳಿಯುತ್ತಾರೆ.