Friday, November 22, 2024
Homeರಾಷ್ಟ್ರೀಯ | Nationalರೇಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ರೇಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಬೆಂಗಳೂರು,ಅ.6- ದೇಶದ ಹಣದುಬ್ಬರದ ಮೇಲೆ ಕಟ್ಟೆಚ್ಚರ ವಹಿಸಿರುವ ಆರ್‌ಬಿಐ ಸತತ ಆರು ಸಭೆಗಳ ಬಳಿಕವೂ ರೇಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ನಿರ್ಧರಿಸಿದ್ದು, ಹಣದುಬ್ಬರ 5.4 ರ ಮಿತಿಗೆ ತಗ್ಗುವ ವಿಶ್ವಾಸ ವ್ಯಕ್ತಪಡಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿತ್ತಿ ನಿರ್ವಹಣಾ ಸಮಿತಿಯ ದ್ವೈಮಾಸಿಕ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರ್‌ಬಿಐ ನ ಗವರ್ನರ್ ಶಕ್ತಿಕಾಂತ್ ದಾಸ್, ವಿತ್ತಿ ನಿರ್ವಹಣಾ ಸಮಿತಿ ರೇಪೊ ದರವನ್ನು ಶೇ.6.5 ರಲ್ಲೇ ಮುಂದುವರೆಸಲು ಸರ್ವಾನುಮತದ ನಿರ್ಣಯ ಕೈಗೊಂಡಿದೆ ಎಂದು ಘೋಷಿಸಿದ್ದಾರೆ.

ಕಳೆದ ವರ್ಷದ ಮೇ ನಲ್ಲಿ ನಡೆದ ಸಭೆಯಲ್ಲಿ 250 ಮೂಲಾಂಕಗಳ ಆಧಾರವಾಗಿ ರೇಪೊ ದರವನ್ನು 6.5 ಕ್ಕೆ ನಿಗದಿ ಮಾಡಲಾಗಿತ್ತು. ಅದಕ್ಕೂ ಮುನ್ನ ಏಪ್ರಿಲ್‍ವರೆಗೂ ಬ್ಯಾಂಕ್ ಬಡ್ಡಿದರದ ರೇಪೊವನ್ನು ಹಂತಹಂತವಾಗಿ ಹೆಚ್ಚಿಸಲಾಗಿತ್ತು.

ಬಾಹ್ಯ ವಲಯದ ಬೆಳವಣಿಗೆಗಳನ್ನು ಸಮೀಪವಾಗಿ ನಿರ್ವಹಿಸಲು ಸಾಧ್ಯವಿದೆ ಎಂದು ಶಕ್ತಿಕಾಂತ್ ದಾಸ್ ಹೇಳುವ ಮೂಲಕ ಭೌಗೋಳಿಕ ರಾಜಕೀಯ ಸಂಘರ್ಷ ಹಾಗೂ ತೈಲಬೆಲೆ ಏರಿಳಿತಗಳ ಅಪಾಯದ ಬಿಸಿ ದೇಶದ ಹಣದುಬ್ಬರಕ್ಕೆ ತಗಲುವುದಿಲ್ಲ ಎಂಬ ಮುನ್ಸೂಚನೆ ನೀಡಿದ್ದಾರೆ.

ಬೆಲೆ ಏರಿಕೆಯ ಮೇಲೆ ಅಗಾಧ ಪರಿಣಾಮ ಬೀರುವ ಹಣದುಬ್ಬರವನ್ನು ನಿಗದಿತ ಪ್ರಮಾಣಕ್ಕೆ ಎಳೆದು ತರುವ ನಿಟ್ಟಿನಲ್ಲಿ ಆರ್‍ಬಿಐ ಸಕ್ರಿಯಾತ್ಮಕ ಪ್ರಯತ್ನಗಳನ್ನು ಕಾಯ್ದುಕೊಂಡಿದೆ. ಈ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಚಾಲ್ತಿಯಲ್ಲಿಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ ವಿಶ್ವದ ನವ ಪ್ರಗತಿಯ ಇಂಜಿನ್ ಆಗಿ ಗುರುತಿಸಿಕೊಂಡಿದೆ. ಸೆಪ್ಟೆಂಬರ್‍ನಲ್ಲಿನ ಹಣದುಬ್ಬರ ತಗ್ಗಿದೆ. ದೇಶೀಯ ಆರ್ಥಿಕತೆ ಸ್ವಾವಲಂಬನೆಗೆ ಬೇಡಿಕೆ ಹೆಚ್ಚಳ ಬೆಂಬಲವಾಗಿದೆ. ಬಂಡವಾಳ ಸರಕುಗಳ ಉತ್ಪಾದನೆ ಖಾಸಗಿ ಕ್ಷೇತ್ರದ ಸುಧಾರಣೆಗೆ ಸಹಕಾರಿ ಎಂದು ವಿಶ್ಲೇಷಿಸಿದ್ದಾರೆ.

ಉದ್ಯಮಿಯಿಂದ 2 ಕೋಟಿ ಲಂಚ ಪಡೆದಿದ್ದರಂತೆ ಸಂಜಯ್‍ಸಿಂಗ್

ಪ್ರಸ್ತುತ ವಿತ್ತೀಯ ವ್ಯವಹಾರಗಳಲ್ಲಿ ಜಿಡಿಪಿ ಬೆಳವಣಿಗೆ ಶೇ.6.5 ರ ಅಂದಾಜಿನಲ್ಲಿದ್ದು, ಅಪಾಯಗಳ ಸಮತೋಲಿತ ಬಾಕಿಯನ್ನು ಕಾಯ್ದುಕೊಳ್ಳಲಾಗುವುದು. 2023-2024 ನೇ ಸಾಲಿನಲ್ಲಿ ಚಿಲ್ಲರೆ ಹಣದುಬ್ಬರ 5.4 ರಷ್ಟು ಆಗಬಹುದು, ಅಡಿಗೆ ಅನಿಲ ದರದ ಏರಿಕೆ ಮತ್ತು ತರಕಾರಿಗಳ ಬೆಲೆ ಕಡಿತಗಳು ಹಣದುಬ್ಬರವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಸ್ತುತ 6.8 ರ ದರದಲ್ಲಿದ್ದು, ಮುಂದಿನ ವರ್ಷದ ವೇಳೆಗೆ 5.2 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ ಆಹಾರ ಹಣದುಬ್ಬರ ಮುಂದಿನ ತ್ರೈಮಾಸಿಕದಲ್ಲಿ ಕಡಿಮೆಯಾಗುವ ಸಾಧ್ಯತೆಗಳು ಇಲ್ಲ ಎಂದು ಹೇಳಿದ್ದಾರೆ.

ಕಳೆದ ಜುಲೈ, ಆಗಸ್ಟ್ ಗಿಂತಲೂ ಸೆಪ್ಟೆಂಬರ್‍ನ ಹಣದುಬ್ಬರ ಪ್ರಮಾಣ ತಗ್ಗಿದೆ. ಅತ್ಯಾವಶ್ಯಕ ವಸ್ತುಗಳಲ್ಲಿನ ಸುಸ್ಥಿರ ಬೆಳವಣಿಗೆ ಇದಕ್ಕೆ ಕಾರಣವಾಗಿದ್ದು, 2023-2024 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರ ಬೆಲೆ ಸೂಚ್ಯಾಂಕ ಶೇ.4.6 ರಷ್ಟಾಗಿದೆ. ಇದೇ ಅವಯ ಕಳೆದ ವರ್ಷದಲ್ಲಿ ಸಿಪಿಐ 7.3 ರಷ್ಟಿತ್ತು.

ಭಾರತೀಯ ಬ್ಯಾಂಕುಗಳು ಆಸ್ತಿ ಗುಣಮಟ್ಟ ಸುಧಾರಣೆಯ ಹಾದಿಯಲ್ಲಿವೆ. ಮಾರುಕಟ್ಟೆ ನಿರ್ವಹಣೆಗೆ ಅಗತ್ಯದಷ್ಟು ದ್ರವ್ಯಸಂಗ್ರಹವನ್ನು ಆರ್‍ಬಿಐ ಪರಿಗಣಿಸಿದೆ. ಆರ್ಥಿಕ ಸುಸ್ಥಿರತೆಗಾಗಿ ಪರಿಸ್ಥಿತಿ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದೇವೆ. ಸೆಪ್ಟೆಂಬರ್ 29 ರ ವೇಳೆಗೆ ಭಾರತದ ವಿದೇಶಿ ವಿನಿಮಯ ಸಂಗ್ರಹ 586.9 ಬಿಲಿಯನ್ ಡಾಲರ್‍ನಷ್ಟಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಹಸ್ತಾಂತರದ ವಿರುದ್ಧ ಮನವಿ ಸಲ್ಲಿಸಲು ರಾಣಾಗೆ ಕಾಲಾವಕಾಶ

4 ಲಕ್ಷ ನಗರ ಸಹಕಾರ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲವನ್ನು ತ್ವರಿತ ಪಾವತಿ ಯೋಜನೆಯಡಿ ದುಪ್ಪಟ್ಟುಗೊಳಿಸಲು ಅನುಮತಿ ನೀಡಲಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಪಾವತಿ ಯೋಜನೆಯನ್ನು ಡಿಸೆಂಬರ್‍ನಿಂದ ಮುಂದಿನ ಎರಡು ವರ್ಷಗಳವರೆಗೆ ಮುಂದುವರೆಸಲು ನಿರ್ಧರಿಸಲಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಚಾಲ್ತಿಯಲ್ಲಿರುವ ಆಂತರಿಕ ಓಂಬುಡ್ಸ್‍ಮನ್ ಪದ್ಧತಿಯನ್ನು ಮತ್ತಷ್ಟು ಸುಧಾರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

RELATED ARTICLES

Latest News