ಭೋಪಾಲ್, ಜು 31- ಮಧ್ಯಪ್ರದೇಶದ ಮದ್ರಸಾ ಮಂಡಳಿಯು ರಾಜ್ಯದ ಶಿಯೋಪುರ್ ಜಿಲ್ಲೆಯಲ್ಲಿ ನಿಯಮ ಪಾಲಿಸದ 56 ಮದರಸಾಗಳ ಮಾನ್ಯತೆಯನ್ನು ರದ್ದುಗೊಳಿಸಿದೆ.
ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಸಲ್ಲಿಸಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.ಮದರಸಾ ಮಂಡಳಿಯು 80 ಮದರಸಾಗಳ ಪೈಕಿ 56 ಮದರಸಾಗಳ ಮಾನ್ಯತೆಯನ್ನು ರದ್ದುಗೊಳಿಸಿದೆ. ಈ ಪೈಕಿ 54 ಮದರಸಾಗಳು ರಾಜ್ಯ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಏತನ್ಮಧ್ಯೆ, ರಾಜ್ಯ ಶಾಲಾ ಶಿಕ್ಷಣ ಸಚಿವ ಉದಯ್ ಪ್ರತಾಪ್ ಸಿಂಗ್ ಮಾತನಾಡಿ, ರಾಜ್ಯಾದ್ಯಂತ ಎಲ್ಲಾ ಡಿಇಒಗಳು ತಮ್ಮವಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳನ್ನು ಪರೀಕ್ಷಿಸಲು ಸೂಚಿಸಿದ್ದಾರೆ.ಶಾಲೆಗೆ ಹೋಗುವ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವಂತೆ ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಿಂಗ್ ಹೇಳಿದರು.
ನಿಯಮಾನುಸಾರ ನಡೆಯದ ಮದರಸಾಗಳ ಮಾನ್ಯತೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಇದರೊಂದಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಭೌತಿಕ ಪರಿಶೀಲನೆ ಕೂಡ ತ್ವರಿತ ಗತಿಯಲ್ಲಿ ನಡೆಯಬೇಕು ಎಂದರು.ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸದ ಮದರಸಾಗಳ ಮಾನ್ಯತೆ ರದ್ದುಪಡಿಸಲು ಪ್ರಸ್ತಾವನೆ ಕಳುಹಿಸಲು ಡಿಇಒಗಳಿಗೆ ಸೂಚಿಸಲಾಗಿದೆ ಎಂದು ಮದರಸಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಯಮಾನುಸಾರ ಕಾರ್ಯನಿರ್ವಹಿಸದ ಮದರಸಾಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ನೀಡುತ್ತಿರುವ ಅನುದಾನವನ್ನು ಕೂಡಲೇ ನಿಲ್ಲಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.