Thursday, November 21, 2024
Homeರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣ : 3991 ಪುಟಗಳ ಚಾರ್ಜ್‌ಶೀಟ್‌ ನ್ಯಾಯಾಲಯಕ್ಕೆ ಸಲ್ಲಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ : 3991 ಪುಟಗಳ ಚಾರ್ಜ್‌ಶೀಟ್‌ ನ್ಯಾಯಾಲಯಕ್ಕೆ ಸಲ್ಲಿಕೆ

Renukaswamy murder case: 3991 page charge sheet submitted to court

ಬೆಂಗಳೂರು, ಸೆ.4- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಚಂದನ್‌ ನೇತೃತ್ವದಲ್ಲಿ ಇಂದು 24ನೆ ಎಸಿಎಂಎಂ ನ್ಯಾಯಾಲಯಕ್ಕೆ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಈ ದೋಷಾರೋಪಣ ಪಟ್ಟಿ ಒಟ್ಟು 231 ಸಾಕ್ಷ್ಯಾಧಾರಗಳ ನ್ನೊಳಗೊಂಡಂತೆ ಒಟ್ಟು 291 ಪುಟಗಳ 3991 ಪುಟಗಳುಳ್ಳ ಏಳು ಸಂಪುಟಗಳ 10 ಕಡತಗಳನ್ನು ಒಳಗೊಂಡಿರುತ್ತದೆ.ಪವಿತ್ರಾಗೌಡ ಎ1 ಮತ್ತು ದರ್ಶನ್‌ ಎ2 ಆರೋಪಿಗಳಾಗಿದ್ದು, ಒಟ್ಟು 17 ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿ ಈವರೆಗೆ ಒಟ್ಟು 17 ಜನರನ್ನು ಬಂಧಿಸಿ ಅವರ ವಿಚಾರಣೆ ನಡೆಸಿ ಮತ್ತು ತನಿಖೆ ವೇಳೆ ಸಂಗ್ರಹಿಸಿದ್ದ ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ.
ಈ ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಗ್ಯಾಂಗ್‌ ವಿರುದ್ಧ ಕೊಲೆ, ಅಪಹರಣ, ಒಳಸಂಚು, ಸಾಕ್ಷ್ಯನಾಶ ಸೇರಿದಂತೆ ಹಲವು ಗಂಭೀರ ಅಪರಾಧಗಳನ್ನು ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಂಟು ಎಫ್‌ಎಸ್‌‍ಎಲ್‌/ಸಿಎಫ್‌ಎಸ್‌‍ಎಲ್‌ನಿಂದ 8, 161 ಮತ್ತು 164ರ ಸಿಆರ್‌ಪಿ ಅಡಿಯಲ್ಲಿ ಒಟ್ಟು 97 ಸಾಕ್ಷಿಗಳು, 59 ಪಂಚರು, 8 ಮಂದಿ ಸರ್ಕಾರಿ ಅಧಿಕಾರಿಗಳಾದ ತಹಸೀಲ್ದಾರ್‌, ವೈದ್ಯರು, ಆರ್‌ಟಿಒ, ಎಂಜಿನಿಯರ್‌ಗಳು, 56 ಮಂದಿ ಪೊಲೀಸರು ಸೇರಿದಂತೆ ಒಟ್ಟು 231 ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ.

ಇದರಲ್ಲಿ ಪ್ರಮುಖವಾಗಿ 164 ಸಿಆರ್‌ಪಿಸಿ ಅಡಿಯಲ್ಲಿ ಹೇಳಿಕೆಗಳನ್ನು ಪಡೆಯಲಾಗಿದ್ದು, ಹಲವು ಛಾಯಾಚಿತ್ರಗಳು, ದರ್ಶನ್‌ ತೊಟ್ಟಿದ್ದ ಬಟ್ಟೆಗಳು, ಪವಿತ್ರಾ ಅವರ ಚಪ್ಪಲಿ ಸೇರಿದಂತೆ ಹಲವು ವಸ್ತುಗಳನ್ನು ಕೂಡ ಸಂಗ್ರಹಿಸಲಾಗಿದೆ.

ಪ್ರಮುಖವಾಗಿ ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡುವಾಗ ದರ್ಶನ್‌ ಅವರು ಅಲ್ಲಿದ್ದರು ಎಂಬ ಬಗ್ಗೆ ಕೆಲವೊಂದು ವಿಡಿಯೋ ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸಿ ಚಾರ್ಜ್‌ಶೀಟ್‌ನಲ್ಲಿ ಈ ಎಲ್ಲ ಅಂಶಗಳನ್ನು ಸಲ್ಲಿಸಲಾಗಿದೆ.

ಈ ಪ್ರಕರಣದ ತನಿಖೆಯನ್ನು ಪೊಲೀಸ್‌‍ ಕಮಿಷನರ್‌ ದಯಾನಂದ, ಹೆಚ್ಚುವರಿ ಪೊಲೀಸ್‌‍ ಕಮಿಷನರ್‌ ಸತೀಶ್‌ಕುಮಾರ್‌, ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌ಕುಮಾರ್‌ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News