Monday, September 16, 2024
Homeರಾಜ್ಯಇನ್ನೆರಡು ದಿನದಲ್ಲಿ ರೇಣುಕಾಸ್ವಾಮಿ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಕೆ

ಇನ್ನೆರಡು ದಿನದಲ್ಲಿ ರೇಣುಕಾಸ್ವಾಮಿ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಕೆ

Renukaswamy murder case charge sheet in next two days

ಬೆಂಗಳೂರು, ಸೆ.2-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯಠಾಣೆ ಪೊಲೀಸರು ದೋಷಾರೋಪ ಪಟ್ಟಿಯನ್ನು ನಾಳೆ ಅಥವಾ ನಾಡಿದ್ದು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಗೌಡ ಸೇರಿದಂತೆ 17ಮಂದಿಯನ್ನು ಈಗಾಗಲೇ ಬಂಧಿಸಿದ್ದು, ಅವರೆಲ್ಲರೂ ಜೈಲಿನಲ್ಲಿದ್ದಾರೆ.

ಕೊಲೆ ಪ್ರಕರಣದ ತನಿಖೆ ಮುಕ್ತಾಯದ ಹಂತದಲ್ಲಿದ್ದು, ತನಿಖಾಧಿಕಾರಿಗಳು 4,500ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟನ್ನು ಸಿದ್ಧ ಮಾಡಿಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌ ಅವರಿಗೆ ತನಿಖೆಗೆ ವಹಿಸಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಎರಡು ಬಾರಿ ಭೇಟಿ ನೀಡಿ, ಯಾವ ರೀತಿ ತನಿಖೆ ಮಾಡಬೇಕು, ಯಾವ ರೀತಿ ದಾಖಲೆಗಳನ್ನು ಸಂಗ್ರಹಿಸಬೇಕು ಎಂಬ ಇತ್ಯಾದಿ ಸಲಹೆ ಸೂಚನೆಗಳನ್ನು ನೀಡಿದ್ದರು.

ರೇಣುಕಾಸ್ವಾಮಿ ಮೃತದೇಹ ಪತ್ತೆಯಾದ ಸ್ಥಳ, ಕೊಲೆಯಾದ ಸ್ಥಳ, ಅವರನ್ನು ಕರೆತಂದ ಮಾರ್ಗಗಳಲ್ಲಿನ ರಸ್ತೆಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿ, ಕೊಲೆಗೆ ಬಳಸಿದ ವಸ್ತುಗಳು, ಆರೋಪಿಗಳ ಮೊಬೈಲ್‌ಗಳಲ್ಲಿರುವ ಮಾಹಿತಿ, ಬೆಂಗಳೂರು, ಹೈದರಾಬಾದ್‌ನ ಎಫ್‌ಎಸ್‌‍ಎಲ್‌ನಿಂದ ತರಿಸಿಕೊಂಡಿರುವ ವರದಿಗಳು, ಆರ್‌ಟಿಓ ಅಧಿಕಾರಿಗಳಿಂದ ಸಂಗ್ರಹಿಸಿರುವ ಮಾಹಿತಿಗಳನ್ನು ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಸಹ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿಗಳು ಸೇರಿದಂತೆ 240ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಪಡೆದು ಚಾರ್ಜ್‌ ಶೀಟ್‌ನಲ್ಲಿ ದಾಖಲಿಸಲಾಗಿದೆ.ಕೊಲೆ ಸಂದರ್ಭದಲ್ಲಿ ಪೊಲೀಸರಿಗೆ ದೊರೆತ ನಾಲ್ಕು ಪ್ರಮುಖ ಸಾಕ್ಷ್ಯಗಳಿಂದ ದರ್ಶನ್‌ ಅಂಡ್‌ ಗ್ಯಾಂಗ್‌ಗೆ ಸಂಕಷ್ಟ ಎದುರಾಗಿದೆ.

ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ರೌಡಿ ವಿಲ್ಸನ್‌ಗಾರ್ಡನ್‌ ನಾಗನ ಜೊತೆ ಕುಳಿತು ಕಾಫಿ, ಸಿಗರೇಟ್‌ ಕೈಯಲ್ಲಿ ಹಿಡಿದುಕೊಂಡಿರುವ ಫೋಟೊ ವೈರಲ್‌ ಆಗಿ ಸಾರ್ವಜನಿಕ ವಲಯದಲ್ಲಿ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೆ ದರ್ಶನ್‌ನನ್ನುಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.

RELATED ARTICLES

Latest News