ಬೆಂಗಳೂರು,ಜ.26- ಆಕರ್ಷಕ ಪಥಸಂಚಲನ, ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಇಂದು ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮಗಳು ಮನಸೂರೆಗೊಂಡವು.
ಸೇನಾಪಡೆ, ಬಿಎಸ್‍ಎಫ್ ಪಡೆ, ಸಿಆರ್‍ಪಿಎಫ್ ಮಹಿಳಾ ಪಡೆ, ಕೇರಳ ರಾಜ್ಯ ಪೊಲೀಸ್ ಪಡೆ, ಕೆಎಸ್‍ಆರ್‍ಪಿ, ಶ್ವಾನದಳ, ಎನ್‍ಸಿಸಿ, ನಗರ ಸಂಚಾರಿ ಪೊಲೀಸ್ ದಳ, ಅಬಕಾರಿ ದಳ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಎನ್‍ಎಸ್‍ಎಫ್ ಭಾರತ ಸ್ಕೌಡ್ಸ್ ಅಂಡ್ ಗೈಡ್ಸ್, ಸಮರ್ಪಣ ಟ್ರಸ್ಟ್‍ನ ವಿಶೇಷ ಚೇತನ ಮಕ್ಕಳು, ವಿವಿಧ ಶಾಲೆಯ ವಿದ್ಯಾರ್ಥಿಗಳು ಶಿಸ್ತುಬದ್ಧ ಪಥಸಂಚಲನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ವಿವಿಧ ತಂಡಗಳಿಂದ ನುಡಿಸಿದ ವಾದ್ಯವೂ ಕೂಡ ಅಷ್ಟೇ ಇಂಪಾಗಿತ್ತು. ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್‍ರವರ ಸಂದೇಶದ ನಂತರ ಶಂಕರ್ ಭಾರತಿಪುರ ಮತ್ತು ಅವರ ತಂಡದಿಂದ ನಾಡಗೀತೆ ಮತ್ತು ರೈತಗೀತೆ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಬಳಿಕ ಬೆಂಗಳೂರು ಉತ್ತರ ತಾಲೂಕಿನ ಎಗ್ಗನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ 700 ಮಕ್ಕಳ ಈ ದೇಶವು ನಮಗಾಗಿಯೇ ಇದೆ ಎಂದೆಂದಿಗೂ ಎಂಬ ಸಾಂಸ್ಕøತಿಕ ಕಾರ್ಯಕ್ರಮ ಮನಮಿಡಿಯುವಂತಿತ್ತು.
ನಂತರ ಬೆಂಗಳೂರು ದಕ್ಷಿಣ ತಾಲೂಕಿನ ಪಿಲ್ಲಣ್ಣ ಗಾರ್ಡನ್‍ನ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಕ್ಷ್ಯಚಿತ್ರ ಸೇರಿದಂತೆ ಅಕ್ಷರದವ್ವ ಸಾವಿತ್ರಿ ಬಾಯಿಪುಲೆ ಸಾಂಸ್ಕøತಿಕ ಕಾರ್ಯಕ್ರಮವು ಜನರ ಮೆಚ್ಚುಗೆಗೆ ಪಾತ್ರವಾಗಿ ಸಭಿಕರಿಂದ ಕರತಾಡನದ ಪ್ರಶಂಸೆ ದೊರೆಯಿತು. ಸಾವಿತ್ರಿ ಬಾಯಿಪುಲೆ ಭಾವಚಿತ್ರದ ಫಲಕ ಹಾಗೂ ರಾಷ್ಟ್ರಧ್ವಜ ಹಿಡಿದು ವೈವಿಧ್ಯಮಯ ಉಡುಗೆ ತೊಡುಗೆ ತೊಟ್ಟಿದ್ದ ವಿದ್ಯಾರ್ಥಿಗಳು ನವಿಲಿನಂತೆ ನರ್ತಿಸಿದರು.
ಎನ್‍ಇಜಿ ಮತ್ತು ಕೇಂದ್ರ ತಂಡದ ಹವಲ್ದಾರ್ ಅನೀಷ್ ಕಾಮತ್ ನೇತೃತ್ವದ 11 ಮಂದಿ ಕಲಾವಿದರ ಕಲರಿಪಯಟ್ಟು ವಿಶೇಷ ಆಕರ್ಷಣೀಯವಾಗಿತ್ತು. ಇದೆಲ್ಲಕ್ಕೂ ಮಿಗಿಲಾಗಿ ಬೆಂಗಳೂರಿನ ಎಎಚ್‍ಇ ಸೆಂಟರ್ ಮತ್ತು ಕಾಲೇಜು ತಂಡವು ಬಾಸ್ಕೊ ರಾಜಸಿಂಗಂ ಕಾಮರಾಜ್ ನೇತೃತ್ವದಲ್ಲಿ ನಡೆಸಿಕೊಟ್ಟ ದ್ವಿಚಕ್ರ ವಾಹನ ಸಾಹಸ ಪ್ರದರ್ಶನವು ಮೈ ನವಿರೇಸುವಂತಿತ್ತು. ಪ್ರತಿಯೊಂದೂ ಕೂಡ ರೋಮಾಂಚಕಾರಿಯಾಗಿತ್ತು. ನೆರೆದಿದ್ದ ಮಕ್ಕಳು, ಮಹಿಳೆಯರು, ಹಿರಿಯರು ಎಲ್ಲರೂ ಕೂಡ ರೋಮಾಂಚನಕಾರಿ ವಾಹನ ಸಾಹಸಗಳನ್ನು ಪ್ರಶಂಸಿಸಿದರು. ಅಂತಿಮವಾಗಿ ಎಸ್‍ಎಫ್ ವಿಶೇಷ ತಂಡ ಹಡಗುತಾಣಗಳಲ್ಲಿ ಹೊಕ್ಕು ಧಾಳಿ ಮಾಡುವ ನಿರೂಪಣೆಯು ಜೇಮ್ಸ್ ಅವರ ನೇತೃತ್ವದಲ್ಲಿ ಅಭೂತಪೂರ್ವವಾಗಿ ಮೂಡಿಬಂದಿತು.
ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ಮಾರ್ಗ
ಒಟ್ಟಾರೆ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮನದ ಪ್ರಶಂಸೆಗೆ ಪಾತ್ರವಾಗಿದ್ದವು. ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್‍ರವರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತವಾದ ತಂಡಗಳಿಗೆ ಬಹುಮಾನ ವಿತರಿಸಿದರು.
ಪಿಲ್ಲಣ್ಣ ಗಾರ್ಡನ್‍ನ ಬಿಬಿಎಂಪಿ ಪದವಿ ಪೂರ್ವ ಕಾಲೇಜು ಮೊದಲ ಸ್ಥಾನ ಪಡೆದರೆ, ಎಗ್ಗನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ಪಡೆದುಕೊಂಡು ಬಹುಮಾನ ಗಳಿಸಿತು.
ಪಥಸಂಚಲನದಲ್ಲಿ ಭಾಗವಹಿಸಿದ ಎನ್‍ಸಿಸಿಗೆ ಗ್ರೂಪ್ 2 ರಲ್ಲಿ ಮೊದಲ, ಎನ್‍ಎಸ್‍ಎಫ್‍ಗೆ ದ್ವಿತೀಯ ಹಾಗೂ ಪ್ರಿನ್ಸೆಸ್ ಮತ್ತು ಕರೆಕ್ಷನಲ್ ಸರ್ವಿಸ್‍ಗೆ ಪಥಸಂಚಲನದಲ್ಲಿ ತೃತೀಯ ಬಹುಮಾನ ನೀಡಲಾಯಿತು.
ಗ್ರೂಪ್ 1 ರಲ್ಲಿ ಆರ್ಮಿಗೆ ಮೊದಲ, ಬಿಎಸ್‍ಎಫ್‍ಗೆ ದ್ವಿತೀಯ, ಸಿಆರ್‍ಪಿಎಫ್ ಮಹಿಳಾ ತುಕಡಿಗೆ ತೃತೀಯ ಸ್ಥಾನದ ಬಹುಮಾನ ನೀಡಲಾಯಿತು.
ಗ್ರೂಪ್ 3 ರಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲೆಗೆ ಮೊದಲ, ಆರ್ಮಿ ಪಬ್ಲಿಕ್ ಶಾಲೆಗೆ ದ್ವಿತೀಯ, ನಂದಿನಿ ಲೇ ಔಟ್‍ನ ಪ್ರೆಸಿಡೆನ್ಸಿ ಶಾಲೆಗೆ ತೃತೀಯ ಬಹುಮಾನ ದೊರೆಯಿತು. ಗ್ರೂಪ್ 4 ರಲ್ಲಿ ಆರ್ಮಿ ಬ್ಯಾಂಡ್ ತಂಡಕ್ಕೆ ಮೊದಲ ಹಾಗೂ ಗ್ರೂಪ್ 5 ರಲ್ಲಿ ಕ್ರಿಸ್ಟ್ ಜಯಂತಿ ಶಾಲೆಯ ಬ್ಯಾಂಡ್ ತಂಡಕ್ಕೆ ಮೊದಲ ಸ್ಥಾನ ಲಭಿಸಿತು.
ರಾಜ್ಯಪಾಲರು ಬಹುಮಾನ ವಿತರಿಸಿದ ಸಂದರ್ಭದಲ್ಲಿ ಬೆಂಗಳೂರು ನಗರದ ಜಿಲ್ಲಾಕಾರಿ ಕೆ.ಎ.ದಯಾನಂದ, ಬೃಹತ್ ಬೆಂಗಳೂರು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಉಪಸ್ಥಿತರಿದ್ದರು.