Friday, November 22, 2024
Homeರಾಜ್ಯ'ರಾಮನಗರ' ಜಿಲ್ಲೆಗೆ ಮರುನಾಮಕರಣ ಮಾಡುವಂತೆ ಸಿಎಂಗೆ ಮನವಿ

‘ರಾಮನಗರ’ ಜಿಲ್ಲೆಗೆ ಮರುನಾಮಕರಣ ಮಾಡುವಂತೆ ಸಿಎಂಗೆ ಮನವಿ

ಬೆಂಗಳೂರು,ಜು.9- ರಾಮನಗರ ಜಿಲ್ಲೆಯ ಮೂಲ ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ, ದೊಡ್ಡಬಳ್ಳಾಪುರ, ಹೊಸಕೋಟೆ, ಯಲಹಂಕ, ನೆಲಮಂಗಲ, ಕನಕಪುರ, ಮಾಗಡಿ, ದೇವನಹಳ್ಳಿ, ಚನ್ನಪಟ್ಟಣ ಎಲ್ಲವೂ ಬೆಂಗಳೂರು ನಗರದ ಭಾಗಗಳಾಗಿದ್ದವು. ಅದನ್ನು ಗ್ರಾಮಾಂತರ ಎಂದು ಬೇರ್ಪಡಿಸಲಾಯಿತು. ಅನಂತರ ಒಂದಿಷ್ಟು ಭಾಗವನ್ನು ಪ್ರತ್ಯೇಕಗೊಳಿಸಿ ರಾಮನಗರ ಜಿಲ್ಲೆ ಮಾಡಲಾಗಿದೆ. ಈ ಪ್ರದೇಶಗಳೆಲ್ಲಾ ಹಳೆಯ ಬೆಂಗಳೂರು ಎಂದೇ ಪ್ರಸಿದ್ಧಿ ಪಡೆದಿವೆ ಎಂದರು.

ಅಮೆರಿಕಾ, ಯೂರೋಪ್‌ ಖಂಡದಲ್ಲಿ ಪ್ರತಿಷ್ಠಿತ ಸ್ಥಳಗಳಿಗೆ ಸ್ವಂತ ಹೆಸರಿದೆ. ಆಡಳಿತಾತಕ ದೃಷ್ಟಿಯಿಂದ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವುದು ಅಗತ್ಯವಾಗಿದೆ ಎಂದು ವಿವರಿಸಿದರು.

ನಾವು ಹೊಸ ಜಿಲ್ಲೆಯನ್ನು ಸೃಷ್ಟಿಸುತ್ತಿಲ್ಲ. ಒಂದು ಕಡೆ ಆಂಧ್ರಪ್ರದೇಶ, ಇನ್ನೊಂದು ಕಡೆ ತಮಿಳುನಾಡು ಗಡಿಯನ್ನು ಬೆಂಗಳೂರಿನ ಭಾಗಗಳು ಹಂಚಿಕೊಂಡಿವೆ. ತುಮಕೂರು ಮತ್ತು ಬಳ್ಳಾರಿ ರಸ್ತೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ದಿಕ್ಕುಗಳಲ್ಲೂ ಬೆಂಗಳೂರು ವಿಸ್ತರಣೆಯಾಗಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದರಿಂದ ಭೂಮಿಯ ಬೆಲೆ ಹೆಚ್ಚಾಗುತ್ತದೆ, ಕೈಗಾರಿಕೆಗಳ ಅಭಿವೃದ್ಧಿಯೂ ಆಗುತ್ತದೆ ಎಂದು ವಿವರಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಇಕ್ಬಾಲ್‌ ಹುಸೇನ್‌, ಮಾಜಿ ಸಂಸದ ಡಿ.ಕೆ.ಸುರೇಶ್‌, ವಿಧಾನಪರಿಷತ್‌ ಸದಸ್ಯರಾದ ಪುಟ್ಟಣ್ಣ, ಎಸ್‌‍.ರವಿ, ಸುಧಾಮ್‌ದಾಸ್‌‍, ಪಿ.ಎಂ.ಲಿಂಗಪ್ಪ, ರಾಜು, ಮಾಜಿ ಶಾಸಕ ಎಂ.ಪಿ.ಅಶ್ವತ್‌್ಥ, ಬಿಎಂಐಸಿಪಿಎ ರಘುನಂದರಾಮಣ್ಣ, ಕೆಪಿಸಿಸಿ ಉಪಾಧ್ಯಕ್ಷ ಜಿಯಾವುಲ್ಲಾ, ರಾಮನಗರ ಜಿಲ್ಲಾ ಕಾಂಗ್ರೆಸ್‌‍ ಸಮಿತಿ ಅಧ್ಯಕ್ಷ ಗಂಗಾಧರ್‌ ಮತ್ತಿತರರು ಸಹಿ ಹಾಕಿದ್ದಾರೆ.

ಆರಂಭದಲ್ಲಿ ಬೆಂಗಳೂರು ಜಿಲ್ಲೆಗೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್‌, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳು ಸೇರಿದ್ದವು.
1986 ರಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಘೋಷಿಸಲಾಯಿತು.

2007 ರಲ್ಲಿ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡ ಬಳ್ಳಾಪುರ ತಾಲ್ಲೂಕುಗಳನ್ನೊಳಗೊಂಡಂತೆ ಹೊಸ ಜಿಲ್ಲೆಯನ್ನು ಘೋಷಿಸಿ ಬೆಂಗಳೂರು ಗ್ರಾಮಾಂತರ ಹೆಸರನ್ನೇ ಉಳಿಸಿಕೊಳ್ಳಲಾಯಿತು. ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ, ರಾಮನಗರ ತಾಲ್ಲೂಕುಗಳನ್ನು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಗಿದೆ.

ಪ್ರಸ್ತುತ ಬೆಂಗಳೂರು ನಗರ, ಅಂತಾರಾಷ್ಟ್ರೀಯ ಖ್ಯಾತಿ ಸಾರ್ವಭೌಮತ್ವ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳಿಗೆ ಲಭ್ಯವಾಗಬೇಕು ಎಂಬುದು ಜನರ ಆಶಯ ಮತ್ತು ನಮ ಚಿಂತನೆಯಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಈ 5 ತಾಲ್ಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಚನೆ ಮಾಡುವಂತೆ ಆಗ್ರಹಿಸಿದ್ದಾರೆ.

RELATED ARTICLES

Latest News