ನವದೆಹಲಿ, ಸೆ. 29- ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿಯನ್ನು ಬಿಟ್ಟು ಉಳಿದ ಆಟಗಾರರನ್ನು ಹರಾಜಿಗೆ ಬಿಟ್ಟುಕೊಟ್ಟು ರೈಟ್ ಟು ಮ್ಯಾಚ್ ನಿಯಮದಡಿ ಆಟಗಾರರನ್ನು ಖರೀದಿಸಬೇಕೆಂದು ಮಾಜಿ ಕ್ರಿಕೆಟಿಗ ಆರ್.ಪಿ.ಸಿಂಗ್ ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಸಮಿತಿಯು ನಿನ್ನೆ ನಡೆದ ಸಭೆಯಲ್ಲಿ ಮುಂಬರುವ ಮೂರು ಆವೃತ್ತಿಗಳಿಗೆ ಕಠಿಣ ನಿಯಮಗಳನ್ನು ಪ್ರಕಟಿಸಿದ್ದು, ಪ್ರತಿ ಫಾಂಚೈಸಿ ಐದು ಅನುಭವಿ ಆಟಗಾರರು ಹಾಗೂ ಒಂದು ಆರ್ಟಿಎಂ ಮೂಲಕ ಒಟ್ಟು 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ಸೂಚಿಸಿದೆ.
ಈ ನಡುವೆ ವಿಶ್ವಕಪ್ ವಿಜೇತ ಬೌಲರ್ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ರುದ್ರಪ್ರತಾಪ್ ಸಿಂಗ್ ಅವರು ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಂಡು ಉಳಿದ ಆಟಗಾರರನ್ನು ಮೆಗಾ ಹರಾಜಿಗೆ ಬಿಟ್ಟುಕೊಡಬೇಕೆಂದು ಹೇಳಿದ್ದಾರೆ.
`ಐಪಿಎಲ್ ನೂತನ ನಿಯಮಗಳಿಂದ ಆರ್ಸಿಬಿ ತಂಡಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಆ ಫ್ರಾಂಚೈಸಿ ಕೇವಲ ವಿರಾಟ್ಕೊಹ್ಲಿಯನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡು ಇತರ ಆಟಗಾರರನ್ನು ತಂಡದಿಂದ ಬಿಡುಗಡೆಗೊಳಿಸಿ ಹರಾಜಿನಲ್ಲಿ ಆರ್ಟಿಎಂ ಮೂಲಕ ತಮಗೆ ಬೇಕಾದ ಆಟಗಾರರನ್ನು ಖರೀದಿಸಬೇಕು. ಉದಾಹರಣೆಗೆ ಯುವ ಆಟಗಾರ ರಜತ್ ಪಾಟಿದಾರ್ರನ್ನು ಹರಾಜಿಗೆ ಬಿಟ್ಟುಕೊಟ್ಟು, ಆತನನ್ನು ಹರಾಜಿನಲ್ಲಿ 11 ಕೋಟಿ ಅಥವಾ ಅದಕ್ಕಿಂತಲೂ ಕಡಿಮೆ ಮೊತ್ತಕ್ಕೆ ಖರೀದಿಸಬಹುದು’ ಎಂದು ಆರ್.ಪಿ.ಸಿಂಗ್ ತಿಳಿಸಿದ್ದಾರೆ.
`ರಜತ್ ಪಾಟೀದಾರ್ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಕರಿಯಾಗುತ್ತಾರೆ ಎಂಬುದು ನನ್ನ ಭಾವನೆ. ಒಂದು ವೇಳೆ ಹರಾಜಿನಲ್ಲಿ ಅವರು 11 ಕೋಟಿಗೆ ಖರೀದಿಯಾದರೆ ಆಗ ಆರ್ಟಿಎಂ ಮೂಲಕ ತಂಡಕ್ಕೆ ಮರು ಕರೆತರಬಹುದು, ಅದೇ ರೀತಿ ಯುವ ವೇಗಿ ಮೊಹಮದ್ ಸಿರಾಜ್ ಹರಾಜಿನಲ್ಲಿ 14 ಕೋಟಿ ಮೊತ್ತಕ್ಕೆ ಬಿಕರಿಯಾಗುವುದಿಲ್ಲ. ಒಂದು ವೇಳೆ ಅವರಿಗೆ ಯಾವುದಾದರೂ ಫ್ರಾಂಚೈಸಿ ಆ ಮೊತ್ತ ನೀಡಿ ಖರೀದಿಸಿದರೆ ಆಗ ಆರ್ಟಿಎಂ ಬಳಸಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು’ ಎಂದು ಆರ್.ಪಿ.ಸಿಂಗ್ ತಿಳಿಸಿದ್ದಾರೆ.
ಐಪಿಎಲ್ ಸಮಿತಿಯ ನೂತನ ನಿಯಮದ ಪ್ರಕಾರ ತಂಡದಲ್ಲಿ ಉಳಿಸಿಕೊಳ್ಳುವ ಮೊದಲ ಆಟಗಾರನಿಗೆ 18 ಕೋಟಿ, ಎರಡು ಮತ್ತು ಮೂರನೇ ಆಟಗಾರನ ಖರೀದಿಗೆ ಕ್ರಮವಾಗಿ 14 ಹಾಗೂ 11 ಕೋಟಿ ರೂ.ಗಳನ್ನು ವ್ಯಯಿಸಬೇಕು. ಅದೇ ರೀತಿ ತಂಡದಲ್ಲಿ ಉಳಿಸಿಕೊಳ್ಳುವ 4 ಮತ್ತು 5ನೇ ಆಟಗಾರನಿಗೆ 18 ಕೋಟಿ ಹಾಗೂ 14 ಕೋಟಿ ರೂ. ವ್ಯಯಿಸಬೇಕಾಗಿದೆ. ಆದ್ದರಿಂದ ಎಲ್ಲಾ ಫ್ರಾಂಚೈಸಿಗಳು ತಂಡದಲ್ಲಿ 3ಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳುವುದು ಅನುಮಾನ ಎಂಬಂತಾಗಿದೆ.