ಬೆಂಗಳೂರು,ಮೇ14-ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಕಳಂಕ ತರಲು ರೇವಣ್ಣ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದರು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರೇವಣ್ಣ ಅವರಿಗೆ ಜಾಮೀನು ನೀಡಿದ್ದು, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಪಡುವ ಸಮಯ ಇದಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ಸಂಭ್ರಮ ಪಡಬೇಕು ಎಂದು ಅವರು ಹೇಳಿದರು.
ಹಾಸನದಲ್ಲಿ ಕೇಳಿಬಂದ ಪೆನ್‌ಡ್ರೈವ್ ಪ್ರಕರಣ ರಾಜ್ಯವೇ ತಲೆತಗ್ಗಿಸುವಂತಹ ಹೀನಾಯ ಘಟನೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪೆನ್‌ಡ್ರೈವ್ ಹಂಚಿಕೆ ಮಾಡಿದವರನ್ನು ಇಲ್ಲಿಯವರೆಗೂ ಕಂಡುಹಿಡಿದಿಲ್ಲ. ಘಟನೆಗೆ ಕಾರಣವಾದ ವ್ಯಕ್ತಿಯನ್ನು ಬಂಧಿಸಲಿಲ್ಲ. ಇದು ಸರ್ಕಾರದ ಬೇಜವಾಬ್ದಾರಿ ಅಲ್ಲವೇ? ಬಿಜೆಪಿಯ ಮಾಜಿ ಶಾಸಕರೊಬ್ಬರ ಎಡಬಲವನ್ನು ಮಾತ್ರ ಹಿಡಿಯಲಾಗಿದೆ. ಇನ್ನೊಂದು ವಾರದಲ್ಲಿ ಮುಖ್ಯವಾದವರನ್ನು ಹಿಡಿಯಲಾಗುತ್ತದೆ ಎನ್ನುತ್ತಾರೆ. ಹಾಗಾದರೆ ಎಸ್‌ಐಟಿ ತನಿಖೆ ಹೇಗೆ ಸೋರಿಕೆಯಾಗುತ್ತಿದೆ ಎಂದು ಪ್ರಶ್ನಿಸಿದರು.
ಎಫ್‌ಐಆರ್ ದಾಖಲಾಗಿರುವ ವ್ಯಕ್ತಿಯನ್ನು ಸಹ ವಶಕ್ಕೆ ಪಡೆದಿಲ್ಲ ಎಂದು ಆರೋಪಿಸಿದ ಅವರು, ಖಾಸಗಿ ಚಾನೆಲ್‌ನಲ್ಲಿ ಸಂದರ್ಶನ ನೀಡುತ್ತಾರೆ ಎಂದರು. ನವೀನ್ ಗೌಡ ಎಂಬಾತ ನಮ ಪಕ್ಷದ ಶಾಸಕರಿಗೆ ಪೆನ್‌ಡ್ರೈವ್ ಕೊಟ್ಟಿರುವುದಾಗಿ ಹೇಳಿದ್ದಾರೆ. ಆದರೂ ಆತನನ್ನು ಪೊಲೀಸರು ಬಂಧಿಸಲಿಲ್ಲ ಎಂದು ಆರೋಪಿಸಿದರು.
ವಿಡಿಯೋದಲ್ಲಿ ಕಾಣಿಸಿಕೊಂಡಂಥ ಮಹಿಳೆಯರ ಕುಟುಂಬದ ಬಗ್ಗೆ ಸರ್ಕಾರಕ್ಕೆ ಅನುಕಂಪ ಇದೆಯೇ? ಮಾಹಿತಿ ತಂತ್ರಜ್ಞಾನದಲ್ಲಿ ಅಪರಾಧಿ ನಿರಪರಾಧಿಯಾಗಬಹುದು. ಸರ್ಕಾರಕ್ಕೆ ಬದ್ದತೆಯಿದ್ದರೆ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಲಿ. ಅಕ್ಕತಂಗಿ, ತಂದೆತಾಯಿಗಳು ನಿಮಗೂ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
ಕೆಲವೇ ಕ್ಷಣಗಳಲ್ಲಿ ಪೆನ್‌ಡ್ರೈವ್ ಬರಲಿದೆ ಎಂದು ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಬಂಧಿಸಿದ್ದಿರಾ? ಎಂದು ಪ್ರಶ್ನಿಸಿದ ಅವರು, ತಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನ್ಯಾಯದ ಹಾಗೂ ಮಹಿಳೆಯ ಪರವಾಗಿ ಇದ್ದೇನೆ ಎಂದು ಹೇಳಿದರು.
ವಿಡಿಯೋದಲ್ಲಿ ಆರೋಪಿತ ವ್ಯಕ್ತಿಯ ಯಾವುದೇ ಚಿತ್ರಣವಿಲ್ಲ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಹಾಗಾದರೆ ಈ ಪ್ರಕರಣ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು.
ದೊಡ್ಡ ತಿಮಿಂಗಲದ ಆಡಿಯೋ ಬಹಿರಂಗಪಡಿಸಿದರು ಎಂದು ವಕೀಲ ದೇವರಾಜೇಗೌಡ ಅವರ ಮೇಲೆ ಕೇಸ್ ಹಾಕಿ ಬಂಧಿಸಲಾಗಿದೆ. ಒಂದು ತಿಂಗಳಿನಿಂದ ಏನೆಲ್ಲಾ ಬೆಳವಣಿಗೆಯಾಯಿತು ಎಂದರು.
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ. ಹೆಣ್ಣುಮಕ್ಕಳಿಗೆ ಬೆದರಿಸಿ ದೂರು ಕೊಡಲು ಪ್ರಯತ್ನ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲಾ ವಿಚಾರಗಳು ಹೊರಗೆ ಬರಲಿದೆ ಎಂದು ಹೇಳಿದರು.
ಹೆದರಿಸಿ ಹೆಣ್ಣುಮಕ್ಕಳಿಂದ ದೂರು ಪಡೆಯುವವರ ಬಗ್ಗೆ ಗೃಹಸಚಿವರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಅವರು ಪ್ರಶ್ನಿಸಿದರು. ಪ್ರಜ್ವಲ್ ನನ್ನ ಅಣ್ಣನ ಮಗನೇ ಇರಬಹುದು. ಆದರೂ ವಿದೇಶಕ್ಕೆ ಹೋಗಿರುವ ಪ್ರಜ್ವಲ್‌ನನ್ನು ಏಕೆ ಕರೆಸಲಿಲ್ಲ. ಬೆಳೆದ ಮಕ್ಕಳು ನಮನ್ನು ಕೇಳಿ ಹೋಗುತ್ತಾರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.