ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗು ತ್ತಿವೆ. ಸಾವು-ನೋವಿನ ಪ್ರಕರಣಗಳು ಅಧಿಕವಾಗುತ್ತಿವೆ. ಸಂಚಾರ ನಿಯಮಗಳ ಉಲ್ಲಂಘನೆ, ಅಜಾಗರೂಕತೆಯ ಚಾಲನೆಯೇ ಇದಕ್ಕೆ ಕಾರಣ ಎನ್ನುವುದು ನಿಚ್ಚಳವಾಗಿ ಗೋಚರಿಸುತ್ತದೆ.
ಪಾನಮತ್ತರಾಗಿ( ಮದ್ಯ ಸೇವನೆ ಮಾಡಿ) ವಾಹನ ಚಲಾಯಿಸುವುದು, ಹೆಲೆಟ್ ಧರಿಸದೇ ವಾಹನ ನಡೆಸುವುದು, ರಾಂಗ್ ಸೈಡ್ನಲ್ಲಿ ವಾಹನ ಸಂಚರಿಸುವುದು, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಲೇನ್ ಶಿಸ್ತು ಪಾಲಿಸದಿರುವುದು, ಸಿಗ್ನಲ್ ಜಂಪ್ ಮಾಡುವುದು, ವೇಗದ ಮಿತಿ ಮೀರಿ ಅತಿವೇಗದಿಂದ ವಾಹನ ಚಾಲನೆ ಮಾಡುವುದು, ವ್ಹೀಲಿಂಗ್ ಮಾಡುವುದು, ಮೊಬೈಲ್ನಲ್ಲಿ ಮಾತನಾಡುತ್ತಾ ಸಾಗುವುದು, ವಾಹನಗಳ ನಡುವೆ ಕನಿಷ್ಠ ಅಂತರದ ಮಿತಿಯನ್ನು ಪಾಲಿಸದೇ ಇರುವುದು, ವಾಹನ ಚಲಾಯಿಸುವಾಗ ಧೂಮಪಾನ ಅಥವಾ ಮದ್ಯಪಾನ ಮಾಡುವುದು, ವಾಹನ ಚಲಾಯಿಸುವಾಗ ಧೂಮಪಾನ ಏಕಾಗ್ರತೆ ಇರದೆ ಅನ್ಯ ಮನಸ್ಕರಾಗಿರುವುದು (Absent mind) ಇವೇ ಮುಂತಾದುವುಗಳನ್ನು ಸಂಚಾರ ನಿಯಮಗಳ ಉಲ್ಲಂಘನೆ ಎನ್ನಬಹುದು.
ಏಕಮುಖ ಸಂಚಾರ ರಸ್ತೆಗಳಲ್ಲಿ ದ್ವಿಮುಖ ಸಂಚಾರ, ಫ್ಲೈಓವರ್ಗಳ ಮೇಲೆ ಬೇಕಾಬಿಟ್ಟಿ ವಾಹನ ಚಾಲನೆ ಮುಂತಾದುವನ್ನೂ ಈ ಸಾಲಿಗೆ ಸೇರಿಸಬಹುದು. ವಾಹನ ಚಾಲನಾ ಪರವಾನಗಿ, ವಾಹನ ವಿಮೆ ಇಲ್ಲದೆ ವಾಹನ ಓಡಿಸುವುದು ಕೂಡ ಸಂಚಾರ ನಿಯಮಗಳ ಉಲ್ಲಂಘನೆಯೇ ಆಗುತ್ತದೆ.
ನಗರದ ರಸ್ತೆಗಳು ಸಾರ್ವಜನಿಕರಿಗೆ ಸುರಕ್ಷಿತವಲ್ಲ ಎಂಬಂತಾಗಿದೆ. ಪಾದಚಾರಿಗಳ ಅವಸ್ಥೆಯಂತೂ ಹೇಳತೀರದು. ಪಾದಚಾರಿ ಮಾರ್ಗಗಳನ್ನು ಬೀದಿಬದಿ ವ್ಯಾಪಾರಿಗಳೋ, ಅಂಗಡಿಗಳ ಮಾಲೀಕರೋ ಅಥವಾ ಫುಟ್ಪಾತ್ ತೆರವಿದ್ದರೂ ಅಲ್ಲಿ ಬೀಡಾಡಿ ನಾಯಿಗಳು ಸಂಚರಿಸುತ್ತಿರುತ್ತವೆ. ಈಗೀಗ ಬಿರಿಯಾನಿ ಅಂಗಡಿಗಳು, ಕಬಾಬ್ ಕಾರ್ನರ್ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಮತ್ತು ಮಾಂಸದ ಅಂಗಡಿಗಳು ಹೆಚ್ಚಾಗುತ್ತಿದ್ದು, ಅಲ್ಲಿ ಸಿಗುವ ಆಹಾರ ತಿಂದು ನಾಯಿಗಳು ಸೊಕ್ಕೇರಿ ಪಾದಚಾರಿಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಅಧಿಕವಾಗುತ್ತಿವೆ.
ಹೀಗಾಗಿ ಪಾದಚಾರಿಗಳು ರಸ್ತೆಯ ಮೇಲೆ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದ್ದು ಅವರು ತಮನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ದ್ವಿಚಕ್ರವಾಹನಗಳ ಸವಾರರಂತೂ ಎಲ್ಲಿಂದ, ಹೇಗೆ ನುಗ್ಗುತ್ತಾರೆ ಎಂದೇ ಹೇಳಲಾಗದು.
ಹಾರ್ನ್ ಕೂಡ ಮಾಡುವುದಿಲ್ಲ. ಅದರಲ್ಲೂ ಎಲೆಕ್ಟ್ರಿಕ್ ವಾಹನಗಳು ಬಂದ ಮೇಲಂತೂ ವಾಹನದ ಸದ್ದು ಕೂಡ ಕೇಳುಸುವುದಿಲ್ಲ. ರೊಯ್ಯನೆ ಬಿರುಗಾಳಿಯಂತೆ ನುಗ್ಗಿಸಿಬಿಡುತ್ತಾರೆ. ಎದುರಿನಿಂದ ಬರುವ ವಾಹನಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತವಾದರೂ ಹಿಂದಿನಿಂದ ಬಂದು ಗುದ್ದಿದರೆ ಅಪಾಯ ಶತಃಸಿದ್ಧ.
ಎಷ್ಟೋ ಜನ ಈ ರೀತಿ ರಸ್ತೆಬದಿಯಲ್ಲಿ ನಡೆಯುವಾಗ ಅಪಾಯಕ್ಕೆ ತುತ್ತಾಗಿದ್ದಾರೆ. ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾದರೆ ಮತ್ತೆ ಹಲವರ ಪ್ರಾಣವೇ ಹೋಗಿದೆ. ಇದಕ್ಕೆಲ್ಲ ಸಂಚಾರ ನಿಯಮಗಳ ಉಲ್ಲಂಘನೆಯೇ ಕಾರಣವಾಗಿದೆ.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಪೈಪೋಟಿ ನೀಡುತ್ತಿರುವ ಇಂದಿನ ದಿನಗಳಲ್ಲಿ ಅವರು ಸಂಚಾರ ನಿಯಮ ಉಲ್ಲಂಘನೆಯಲ್ಲೂ ಹಿಂದೆ ಬಿದ್ದಿಲ್ಲ. ಮಹಿಳಾ ಚಾಲಕರು ಕೂಡ ಸಿಗ್ನಲ್ ಜಂಪ್ ಮಾಡುವುದು ನಿತ್ಯಗೋಚರ.
ಪೊಲೀಸರು ದಂಡ ಹಾಕುವುದನ್ನು ತಪ್ಪಿಸಿಕೊಳ್ಳಲು ವಾಹನ ಚಾಲಕರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ನಂಬರ್ ಪ್ಲೇಟ್ನ್ನು ಕಾಲಿನಿಂದಲೋ, ವಸ್ತ್ರದಿಂದಲೋ ಮರೆ ಮಾಡುವುದು, ಹಿಂಬದಿ ನಂಬರ್ ಪ್ಲೇಟ್ ಹಾಕಿಕೊಳ್ಳದೆ ಸಂಚರಿಸುವುದು ಇತ್ಯಾದಿ.
ಕುಡಿದು ವಾಹನ ಚಲಾಯಿಸುವುದು ಗಂಭೀರ ಅಪರಾಧಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಇತ್ತೀಚೆಗೆ ಪಾನಮತ್ತರಾಗಿ ವಾಹನ ಚಲಾಯಿಸಿ ಡಿವೈಡರ್ಗೋ, ಮರಕ್ಕೋ ಡಿಕ್ಕಿ ಹೊಡೆಯುವ ಅಥವಾ ಇತರ ವಾಹನಗಳ ಮೇಲೆ ನುಗ್ಗಿಸಿ ಸರಣಿ ಅಪಘಾತಗಳನ್ನು ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರು ಒಂದರಲ್ಲೇ ಒಂದೇ ದಿನ ಹತ್ತಾರು ಶಾಲಾವಾಹನಗಳ ಚಾಲಕರು ಪಾನಮತ್ತರಾಗಿ ವಾಹನ ಚಲಾಯಿಸುವಾಗ ಸಿಕ್ಕಿ ಬಿದ್ದಿದ್ದ ಉದಾಹರಣೆ ಇದೆ.
ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನದ ಚಾಲಕರು ಪಾನಮತ್ತರಾಗುವುದು ಅಕ್ಷಮ್ಯ.
ಬೆಂಗಳೂರಿನ ಮಹಾತ ಗಾಂಧಿ ರಸ್ತೆಯಲ್ಲಿ ಮೂವರು ಯುವಕರು ಮೋಟಾರ್ ಬೈಕ್ನಲ್ಲಿ ಮದ್ಯ ಕುಡಿಯುತ್ತಾ ಸಂಚರಿಸಿ ಪುಂಡಾಟಿಕೆ ಮಾಡಿದ್ದು ಇತ್ತೀಚೆಗೆ ವರದಿಯಾಗಿತ್ತು. ಜನತೆಗೆ ಕಾನೂನಿನ ಭಯ ಇಲ್ಲವಾಗಿದೆಯೇ?
ಇನ್ನು ಅಗತ್ಯವಿದ್ದಾಗ ಹಾರ್ನ್ ಮಾಡದ ವಾಹನ ಚಾಲಕರು ಆಸ್ಪತ್ರೆ, ಧಾರ್ಮಿಕ-ಆಧ್ಯಾತಿಕ ಸ್ಥಳಗಳು ಮತ್ತು ಶಾಲಾಕಾಲೇಜುಗಳಂತಹ ಶಾಂತತೆ ಬಯಸುವ ಸ್ಥಳಗಳಲ್ಲಿ ಕರ್ಕಶವಾಗಿ ಹಾರ್ನ್ ಮಾಡುತ್ತಾರೆ.
ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘನೆಯ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ಲಕ್ಷಾಂತರ ರೂ.ಗಳ ದಂಡ ವಸೂಲಿ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಯ ವಾಹನಗಳನ್ನು ತಡೆದು ಪ್ರಶ್ನಿಸುವ ಪೊಲೀಸರ ಮೇಲೆಯೇ ವಾಹನ ಚಾಲಕರು ವಾಗ್ವಾದ ನಡೆಸಿ ಹಲ್ಲೆ ಮಾಡಿರುವ ನಿದರ್ಶನಗಳೂ ಉಂಟು.
ಆದರೆ ಸಂಚಾರ ನಿಯಮಗಳನ್ನು ಪಾಲಿಸುವುದು ಪೊಲೀಸರು ದಂಡ ವಿಧಿಸುವುದರಿಂದ ತಪ್ಪಿಸಿಕೊಳ್ಳುವುದಕ್ಕಲ್ಲ, ನಮ ಸುರಕ್ಷತೆಗಾಗಿಯೇ ಎಂಬ ಅರಿವು ಅತ್ಯಗತ್ಯ.
ಪೊಲೀಸ್ ಇಲಾಖೆ ಸುಗಮ ಸಂಚಾರ ವ್ಯವಸ್ಥೆಗೆ, ಅಪಘಾತಗಳ ತಡೆಗೆ ಇನ್ನಿಲ್ಲದಂತೆ ಪ್ರಯಸ್ನಿಸುತ್ತಲೇ ಇದೆ. ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಲೇ ಇದೆ.
ಅವಸರವೇ ಅಪಘಾತಕ್ಕೆ ಕಾರಣ ಎಂಬ ಪ್ರಸಿದ್ದ ಘೋಷವಾಕ್ಯವೊಂದನ್ನು ಅನುಸರಿಸಿದರೂ ಎಷ್ಟೋ ಅಪಘಾತಗಳನ್ನು ನಿವಾರಿಸಬಹುದು ಪೊಲೀಸ್ ಇಲಾಖೆ ರಸ್ತೆ ಸುರಕ್ಷತಾ ಸಪ್ತಾಹ ಹಮಿಕೊಂಡು ಸುರಕ್ಷಿತ ರಸ್ತೆ ಸಂಚಾರದ ಬಗ್ಗೆ ಅರಿವು ಮೂಡಿಸುತ್ತಿದೆ. ಸಂಚಾರಿ ಪೊಲೀಸ್ ಆಗಿ ಕರ್ತವ್ಯನಿರತರಾಗಿದ್ದ ವೇಳೆಯೇ ಪೊಲೀಸ್ ಮೀಸೆ ತಿಮಯ್ಯ ಅವರು ಓರ್ವ ಮಹಿಳೆ ಮತ್ತು ಮಗುವನ್ನು ಅಪಘಾತದಿಂದ ರಕ್ಷಿಸಲು ಹೋಗಿ ತಮ ಪ್ರಾಣವನ್ನೇ ಅರ್ಪಿಸಿದ್ದಾರೆ.
ಪೊಲೀಸ್ ಇಲಾಖೆ ಇದಕ್ಕಿಂತ ಜನಸ್ನೇಹಿಯಾಗುವುದು ಸಾಧ್ಯವೇ? ಒಮೆ ಯೋಚಿಸಿ ನೋಡಿ.
ನಮಗೆ ತೊಂದರೆಯಾಗಬಾರದು ಎಂಬ ಧಾವಂತದಲ್ಲಿ ನಾವು ಇತರರಿಗೆ ತೊಂದರೆ ಕೊಡಬಾರದು ಅಲ್ಲವೇ? ನೀವೇ ಯೋಚಿಸಿ. ವಾಹನ ಚಾಲಕರೇ, ಸಂಚಾರ ನಿಯಮಗಳ ಪಾಲನೆ ಪೊಲೀಸರಿಂದ ಪಾರಾಗುವುದಕ್ಕಲ್ಲ, ನಮ ನಿಮ ಜೀವ ರಕ್ಷಣೆಗಾಗಿ, ಸುರಕ್ಷತೆಗಾಗಿ ಎಂಬ ಅಂಶವನ್ನು ನಾವೆಲ್ಲರೂ ಮನಗಾಣಬೇಕಿದೆ.